Sunday, 18 June 2017

ರೀಚಾರ್ಜ್‌ಗೆ ಸುಲಭ ವಿಧಾನ

ದೂರವಾಣಿ ಕರೆಯಿಂದ ಪ್ರಾರಂಭಿಸಿ ವಾಟ್ಸ್‌ಆಪ್‌ವರೆಗೆ, ಇಮೇಲ್ ಬಳಸುವುದರಿಂದ ಫೋಟೋ ತೆಗೆಯುವವರೆಗೆ, ಆನ್‌ಲೈನ್ ಶಾಪಿಂಗಿನಿಂದ ಶೇರು ವ್ಯವಹಾರದವರೆಗೆ ಇಂದು ಪ್ರತಿಯೊಂದಕ್ಕೂ ನಮಗೆ ಮೊಬೈಲ್ ಬೇಕು. ಒಂದಷ್ಟು ಸಮಯ ಮೊಬೈಲ್ ಫೋನ್ ಬಳಸದೆ ಇರಲು ಸಾಧ್ಯವೇ ಎಂದು ಕೇಳಿದರೆ ಬಹಳಷ್ಟು ಜನ ಖಂಡಿತಾ ಇಲ್ಲ! ಎಂದೇ ಹೇಳುತ್ತಾರೇನೋ.

ಮೊಬೈಲ್ ಮಾಯೆ ನಮ್ಮನ್ನು ಆವರಿಸಿಕೊಂಡಿರುವ ಪರಿಯೇ ಅಂಥದ್ದು. ಊಟ ಬಟ್ಟೆ ಹೊಂದಿಸಿಕೊಳ್ಳುವ ಜೊತೆಗೆ ಮೊಬೈಲ್ ರೀಚಾರ್ಜ್ ಮಾಡಿಸುವುದೂ ಇಂದಿನ ಬದುಕಿನ ಅಗತ್ಯಗಳಲ್ಲೊಂದು.

ಹೌದು ಮತ್ತೆ, ಎಷ್ಟು ಸಾವಿರದ ಹ್ಯಾಂಡ್‌ಸೆಟ್ ಆದರೇನಂತೆ - ಸರಿಯಾದ ಸಮಯಕ್ಕೆ ರೀಚಾರ್ಜ್ ಮಾಡಿಸಲಿಲ್ಲ ಅಥವಾ ಬಿಲ್ ಪಾವತಿಸಲಿಲ್ಲ ಎಂದರೆ ಅದು ಬದುಕಿದ್ದೂ ಸತ್ತಂತೆಯೇ ಲೆಕ್ಕ. ಮೊಬೈಲ್ ಕೆಲಸಮಾಡುತ್ತಿಲ್ಲ ಎಂದರೆ ಫೋನ್ ಮಾಡುವುದು ಹೇಗೆ, ಮೆಸೇಜ್ ಕತೆಯೇನು, ಫೇಸ್‌ಬುಕ್ಕಿನ ವೀಡಿಯೋಗಳನ್ನು ನೋಡುವುದು-ಹಂಚಿಕೊಳ್ಳುವುದಾದರೂ ಹೇಗೆ!?

ಕೆಲ ವರ್ಷಗಳ ಹಿಂದೆ ಮೊಬೈಲ್ ರೀಚಾರ್ಜ್ ಮಾಡಿಸಬೇಕೆಂದರೆ ಅಂಗಡಿಗಳನ್ನು ಹುಡುಕಿಕೊಂಡು ಅಲೆಯಬೇಕಿತ್ತು. ಆ ಕಂಪನಿಯ ಕಾರ್ಡು ಸ್ಟಾಕಿಲ್ಲ ನಾಳೆ ಬನ್ನಿ ಎನ್ನುವಂತಹ ಮಾತನ್ನೂ ಕೇಳುವ ಸಾಧ್ಯತೆಯಿತ್ತು. ಪೋಸ್ಟ್‌ಪೇಡ್ ಬಿಲ್ ಪಾವತಿಸಲು ಸರದಿಯ ಸಾಲಿನಲ್ಲಿ ನಿಲ್ಲುತ್ತಿದ್ದದ್ದೂ ಉಂಟು.

ಈ ಪರಿಸ್ಥಿತಿ ನಿಧಾನಕ್ಕೆ ಬದಲಾದಾದಂತೆ ಮೊಬೈಲ್ ರೀಚಾರ್ಜ್ ಎನ್ನುವುದು ಒಂದು ಕಾಲಕ್ಕೆ ಅಂಗಡಿಯಲ್ಲಿ ಸಿಗುತ್ತಿದ್ದ ಭೌತಿಕ ವಸ್ತುವಾಗಿತ್ತು ಎನ್ನುವುದೇ ಮರೆತುಹೋಗುತ್ತಿದೆ. ಹಳೆಯ ಕಡತಗಳಲ್ಲಿ ಸೇರಿಕೊಂಡಿದ್ದು ಯಾವಾಗಲೋ ಕೈಗೆ ಸಿಗುವ ಬಣ್ಣಬಣ್ಣದ ರೀಚಾರ್ಜ್ ಕಾರ್ಡುಗಳು ಮ್ಯೂಸಿಯಂ ಪೀಸುಗಳಂತೆ ಕಾಣಲು ಶುರುವಾಗಿವೆ.

ಪ್ರೀಪೇಡ್ ಖಾತೆಯಲ್ಲಿನ ಹಣ ಕಡಿಮೆಯಾಗಿದೆ ಎಂದರೆ ಸಾಕು, ಮೊಬೈಲ್ ಸಂಸ್ಥೆಯ ಜಾಲತಾಣದಿಂದ ಪ್ರಾರಂಭಿಸಿ ಬ್ಯಾಂಕಿನ ಎಟಿಎಂವರೆಗೆ ಎಲ್ಲಿ ಯಾವಾಗ ಬೇಕಿದ್ದರೂ ರೀಚಾರ್ಜ್ ಮಾಡಿಸುವುದು ಇದೀಗ ಸಾಧ್ಯ. ಅಂಗಡಿಗಳಲ್ಲೂ ಅಷ್ಟೆ, ಮುದ್ರಿತ ರೀಚಾರ್ಜ್ ಕಾರ್ಡುಗಳ ಜಾಗವನ್ನು ಮಾಲೀಕನ ಕೈಯಲ್ಲಿನ ಮೊಬೈಲು ಆಕ್ರಮಿಸಿಕೊಂಡಾಗಿದೆ; ಮೊಬೈಲ್ ಸಂಖ್ಯೆ ಮತ್ತು ರೀಚಾರ್ಜ್ ಮೊತ್ತ ದಾಖಲಿಸಿದ ಕ್ಷಣದಲ್ಲೇ ನಿಮ್ಮ ಮೊಬೈಲಿಗೆ ಮರುಜೀವ!

ಮೊಬೈಲ್ ಮೇಲೆ ಎಷ್ಟೆಲ್ಲ ಅವಲಂಬಿತರಾಗಿರುವ ನಾವು ಅದಕ್ಕಾಗಿ ಹಣ ಪಾವತಿಸಲೂ ಮೊಬೈಲನ್ನೇ ಬಳಸದಿದ್ದರೆ ಅವಮಾನವೇ ಸರಿ. ಹಾಗಂದಮೇಲೆ ಇನ್ನೇನು, ಕುಳಿತ ಜಾಗದಲ್ಲೇ ರೀಚಾರ್ಜ್ ಹಾಗೂ ಪೋಸ್ಟ್‌ಪೇಡ್ ಬಿಲ್ ಪಾವತಿ ಮಾಡಲು ನೆರವಾಗುವ ಅನೇಕ ಆಪ್‌ಗಳು ನಮ್ಮ ಮುಂದೆ ಬಂದಿವೆ. ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ನೆಟ್‌ಬ್ಯಾಂಕಿಂಗುಗಳ ಜೊತೆಗೆ ವ್ಯಾಲೆಟ್‌ಗಳನ್ನು ಬಳಸಿಯೂ ರೀಚಾರ್ಜ್ ಮಾಡುವುದು ಸಾಧ್ಯವಾಗಿದೆ.

ಕಂಪ್ಯೂಟರಿನಲ್ಲಿ ಸಾಧ್ಯವಾಗುವ ಎಲ್ಲ ಕೆಲಸಗಳನ್ನು ಮೊಬೈಲಿನಲ್ಲೂ ಮಾಡಬಹುದು. ಹಾಗಾಗಿ ರೀಚಾರ್ಜನ್ನೋ ಬಿಲ್ ಪಾವತಿಯನ್ನೋ ಮೊಬೈಲ್ ಬಳಸಿಯೇ ಮಾಡುವುದು ವಿಶೇಷ ಸಂಗತಿಯೇನಲ್ಲ. ಆದರೆ ಈ ವ್ಯವಹಾರದ ಸುತ್ತ ಹೊಸದೊಂದು ಪರಿಕಲ್ಪನೆ ರೂಪುಗೊಂಡಿದೆಯಲ್ಲ, ಅದು ವಿಶೇಷ!

ಗ್ರಾಹಕ ಕೊಟ್ಟ ಹಣಕ್ಕೆ ಪ್ರತಿಯಾಗಿ ಮೊಬೈಲ್ ರೀಚಾರ್ಜನ್ನಷ್ಟೆ ಮಾಡಿ ಸುಮ್ಮನಾಗುವ ಬದಲು ಹೆಚ್ಚುವರಿ ಸೌಲಭ್ಯಗಳನ್ನೂ ನೀಡುವುದು ಈ ಹೊಸ ಪರಿಕಲ್ಪನೆಯ ಸಾರಾಂಶ. ಅಂದರೆ, ನಿಮ್ಮ ಪ್ರೀಪೇಡ್ ಖಾತೆಗೆ ಸೇರಿಸಲೆಂದು ಇಂತಹ ತಾಣಗಳಿಗೆ ನೂರು ರೂಪಾಯಿ ಕೊಟ್ಟರೆ ಅವು ಅಷ್ಟು ಮೊತ್ತದ ರೀಚಾರ್ಜ್ ಮಾಡುವ ಜೊತೆಗೆ ಉಚಿತ ಕೊಡುಗೆಗಳನ್ನೂ ನೀಡುತ್ತವೆ.

ಜಾಲತಾಣ ಹಾಗೂ ಮೊಬೈಲ್ ಆಪ್ ಮೂಲಕ ಇಂತಹ ಸೇವೆ ಒದಗಿಸುವ ಸಂಸ್ಥೆಗಳಿಗೆ ಉದಾಹರಣೆಯಾಗಿ 'ಫ್ರೀಚಾರ್ಜ್' ಹಾಗೂ 'ಪೇಟಿಎಂ'ಗಳನ್ನು ಹೆಸರಿಸಬಹುದು. ಮೊಬೈಲ್ ರೀಚಾರ್ಜ್, ಪೋಸ್ಟ್‌ಪೇಡ್ ಬಿಲ್ ಪಾವತಿ ಅಥವಾ ಡಿಟಿಎಚ್ ಖಾತೆಗೆ ಹಣ ತುಂಬಿಸಲೆಂದು ಇಲ್ಲಿಗೆ ಬರುವ ಗ್ರಾಹಕರು ವಿವಿಧ ಸಂಸ್ಥೆಗಳ ಉತ್ಪನ್ನಗಳ ಮೇಲೆ ರಿಯಾಯಿತಿ ನೀಡುವ ಕೂಪನ್ನುಗಳನ್ನು ಪಡೆಯಬಹುದು. ಆನ್‌ಲೈನ್ ಶಾಪಿಂಗ್ ತಾಣಗಳಲ್ಲಿ, ಪಿಜ್ಜಾ-ಬರ್ಗರ್ ಅಂಗಡಿಗಳಲ್ಲಿ, ಕಾಫಿ ಶಾಪ್‌ಗಳಲ್ಲಿ ಬಳಸಬಹುದಾದ ಕೂಪನ್ನುಗಳನ್ನು ಇಲ್ಲಿ ಆಯ್ದುಕೊಳ್ಳುವುದು ಸಾಧ್ಯ. ನಾವು ಮಾಡಿಸುವ ರೀಚಾರ್ಜ್‌ಗೆ ಪ್ರತಿಯಾಗಿ ಹಲವು ಕೂಪನ್ನುಗಳು ಉಚಿತವಾಗಿಯೇ ಸಿಕ್ಕರೆ ಇನ್ನು ಕೆಲವು ಕೂಪನ್ನುಗಳಿಗೆ ನಿರ್ದಿಷ್ಟ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ.

ಈಗಾಗಲೇ ಹೇಳಿದಂತೆ ಕೆಲವು ತಾಣಗಳಲ್ಲಿ 'ವ್ಯಾಲೆಟ್' ಸೌಲಭ್ಯವೂ ಇರುತ್ತದೆ. ಅಂದರೆ, ನಮ್ಮ ಖಾತೆಗೆ ಮುಂಚಿತವಾಗಿಯೇ ಹಣವನ್ನು ಹಾಕಿಟ್ಟು ಬೇಕಾದಾಗ ಬೇಕಾದಷ್ಟು ಮೊತ್ತದ ರೀಚಾರ್ಜನ್ನೋ ಬಿಲ್ ಪಾವತಿಯನ್ನೋ ಮಾಡುವುದು ಸಾಧ್ಯ. ಕೆಲ ಸಂದರ್ಭಗಳಲ್ಲಿ ನಾವು ಪಾವತಿಸುವ ಹಣದ ಒಂದು ಭಾಗವನ್ನು 'ಕ್ಯಾಶ್‌ಬ್ಯಾಕ್' ರೂಪದಲ್ಲಿ ನಮ್ಮ ಬಳಕೆಗೆಂದು ಮರಳಿಸುವ ಅಭ್ಯಾಸವೂ ಇದೆ. ಈ ಮೊತ್ತವನ್ನು ಮುಂದಿನ ರೀಚಾರ್ಜ್‌ಗಾಗಿ ಬಳಸಬಹುದು.

ಮೊಬೈಲ್-ಡಿಟಿಎಚ್ ರೀಚಾರ್ಜ್ ಆಗಲಿ, ಪ್ರೀಪೇಡ್ ಬಿಲ್ ಪಾವತಿಯಾಗಲಿ ಹೇಗಿದ್ದರೂ ನಾವು ಮಾಡುವ ಕೆಲಸಗಳೇ. ಈ ಪ್ರಕ್ರಿಯೆಯಲ್ಲಿ ನಮಗೆ ಹೆಚ್ಚಿನದೇನೋ ಸಿಗುತ್ತಿದೆ ಎಂದರೆ ಗ್ರಾಹಕರಿಗೆ ಖುಷಿ. ಅದೇ ಸಮಯದಲ್ಲಿ ತಮ್ಮ ರಿಯಾಯಿತಿ ಕೂಪನ್ನುಗಳ ಮೂಲಕ ಹೆಚ್ಚು ಗ್ರಾಹಕರನ್ನು ತಲುಪುವ ಹಾಗೂ ವಹಿವಾಟನ್ನು ವಿಸ್ತರಿಸಿಕೊಳ್ಳುವ ಅವಕಾಶ ಜಾಹೀರಾತು ನೀಡುವ ಸಂಸ್ಥೆಗಳಿಗೂ ಸಿಗುತ್ತದೆ. ಇನ್ನು ಈ ಸೌಲಭ್ಯ ಒದಗಿಸಿಕೊಟ್ಟ ಸಂಸ್ಥೆಗೆ ರೀಚಾರ್ಜ್ ಇತ್ಯಾದಿಗಳ ಮೂಲಕ ದೊರಕುವ ಕಮೀಶನ್ ಹಾಗೂ ಜಾಹೀರಾತು ಶುಲ್ಕ ದೊರಕುತ್ತದೆ. ಅಲ್ಲಿಗೆ ಎಲ್ಲರಿಗೂ ಸಂತೋಷ!

ಮೊಬೈಲ್ ರೀಚಾರ್ಜ್ ಮಾಡಿಸಿದ್ದಕ್ಕೆ ಉಚಿತ ಕೊಡುಗೆಗಳನ್ನು ನೀಡುವುದೇನೋ ಸರಿ. ಇದರ ಬದಲು ಮೊಬೈಲ್ ರೀಚಾರ್ಜನ್ನೇ ಉಚಿತವಾಗಿ ಮಾಡಿಕೊಟ್ಟರೆ ಹೇಗೆ? 

ಇದನ್ನು ಸಾಧ್ಯವಾಗಿಸಿರುವ ಸಂಸ್ಥೆಗಳೂ ಇವೆ. ಅವುಗಳ ಜಾಲತಾಣ ಇಲ್ಲವೇ ಮೊಬೈಲ್ ಆಪ್ ಬಳಸಿ ಪೂರ್ವನಿರ್ಧಾರಿತ ಚಟುವಟಿಕೆಗಳನ್ನು ಕೈಗೊಂಡರೆ ಆ ಚಟುವಟಿಕೆಗೆ ತಕ್ಕಷ್ಟು ಪ್ರತಿಫಲ ಬಳಕೆದಾರರ ಖಾತೆಗೆ ಜಮೆಯಾಗುತ್ತದೆ. ಆ ತಾಣದಲ್ಲಿರುವ ಕೊಂಡಿಯನ್ನು ಬಳಸಿ ಇತರ ತಾಣಗಳಲ್ಲಿ ಶಾಪಿಂಗ್ ಮಾಡುವುದು, ಬಳಕೆದಾರರಾಗಿ ನೋಂದಾಯಿಸಿಕೊಳ್ಳುವುದು, ಪ್ರವಾಸೋದ್ಯಮ ತಾಣಕ್ಕೆಂದು ಹೋಟಲ್ ವಿಮರ್ಶೆ ಬರೆಯುವುದು, ಕ್ರೆಡಿಟ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸುವುದು, ವಿಮೆ ಖರೀದಿಸುವುದು ಮುಂತಾದ ಹಲವು ಚಟುವಟಿಕೆಗಳು ನಮಗೆ ಉಚಿತ ರೀಚಾರ್ಜ್ ಸಂಪಾದಿಸಿಕೊಡಬಲ್ಲವು. ತಮ್ಮ ಬಳಕೆದಾರರಿಗೆ ಈ ಬಗೆಯ ಸೌಲಭ್ಯ ಒದಗಿಸುವ ಸೇವೆಗಳಿಗೆ ಫ್ರೀಚಾರ್ಜ್ ಜಾಲತಾಣದಲ್ಲಿರುವ 'ಡಿಲೈಟ್ಸ್' ವಿಭಾಗ ಒಂದು ಉದಾಹರಣೆ.

ಮೊಬೈಲ್ ಬಳಕೆದಾರರು ಹೇಗೂ ತಮ್ಮ ಮೊಬೈಲಿಗೆ ಹೊಸಹೊಸ ಆಪ್‌ಗಳನ್ನು ಬರಮಾಡಿಕೊಳ್ಳುತ್ತಿರುತ್ತಾರಲ್ಲ, ಹಾಗೆ ಆಪ್ ಡೌನ್‌ಲೋಡ್ ಮಾಡಿಕೊಳ್ಳುವುದಕ್ಕೂ ಪ್ರತಿಫಲ ನೀಡುವ ವ್ಯವಸ್ಥೆಗಳಿವೆ. 'ಫ್ರೀಪೈಸಾ' ( http://freepaisa.co/3e4a3f4f )ಎನ್ನುವುದು ಇದಕ್ಕೊಂದು ಉದಾಹರಣೆ.

ಆಂಡ್ರಾಯ್ಡ್ ಮೊಬೈಲುಗಳಿಗಾಗಿ ಲಭ್ಯವಿರುವ ಫ್ರೀಪೈಸಾ ಆಪ್ ಬಳಕೆದಾರರಿಗೆ ಅದರಲ್ಲಿ ಒಂದಷ್ಟು ಆಪ್‌ಗಳ ಪಟ್ಟಿ ಕಾಣಸಿಗುತ್ತದೆ. ಆ ಪಟ್ಟಿಯಲ್ಲಿ ನಮಗಿಷ್ಟವಾದ ಆಪ್ ಆಯ್ದುಕೊಂಡರೆ ಪ್ಲೇ ಸ್ಟೋರಿನಲ್ಲಿ ಆ ಆಪ್‌ನ ಪುಟ ತೆರೆದುಕೊಳ್ಳುತ್ತದೆ. ಅದನ್ನು ಡೌನ್‌ಲೋಡ್ ಮಾಡಿಕೊಂಡು ಉಪಯೋಗಿಸುತ್ತಿದ್ದಂತೆ ನಮ್ಮ ಫ್ರೀಪೈಸಾ ಖಾತೆಗೆ ಕೆಲ ರೂಪಾಯಿಗಳು ಸೇರಿಕೊಳ್ಳುತ್ತವೆ! ಹಾಗೆ ಸೇರುವ ಮೊತ್ತ ಹತ್ತು ರೂಪಾಯಿ ದಾಟುತ್ತಿದ್ದಂತೆ ಅದನ್ನು ಬಳಸಿ ಮೊಬೈಲ್ ರೀಚಾರ್ಜ್ ಮಾಡಿಸಿಕೊಳ್ಳುವುದು ಸಾಧ್ಯವಾಗುತ್ತದೆ. ಈ ವ್ಯವಸ್ಥೆಯ ಮೂಲಕ ತಮ್ಮ ಆಪ್‌ಗಳ ಪ್ರಚಾರ ಬಯಸುವವರು 'ಫ್ರೀಪೈಸಾ'ಗೆ ನಿರ್ದಿಷ್ಟ ಜಾಹೀರಾತು ಶುಲ್ಕ ಪಾವತಿಸಬೇಕು. ಆ ಶುಲ್ಕದ ಒಂದು ಭಾಗವನ್ನೇ ಬಳಕೆದಾರರಿಗೆ ಪ್ರತಿಫಲವಾಗಿ ನೀಡಲಾಗುತ್ತದೆ.

ಹೀಗೆ ಶುರುವಾಗಿರುವ ಈ ಹೊಸ ವ್ಯವಸ್ಥೆಗಳು ಮುಂದಿನ ದಿನಗಳಲ್ಲಿ ಜಾಹೀರಾತು ಜಗತ್ತಿನ ಸ್ವರೂಪವನ್ನೇ ಬದಲಿಸಲಿವೆ ಎನ್ನುವುದು ತಜ್ಞರ ಅಭಿಪ್ರಾಯ. ಇಂತಹ ವ್ಯವಸ್ಥೆಗಳಲ್ಲಿ ಗ್ರಾಹಕನ ಕುರಿತು ಹೆಚ್ಚಿನ ವಿವರಗಳನ್ನು (ಸ್ಥಳ, ವಯಸ್ಸು, ಆದಾಯ, ಆಸಕ್ತಿಗಳು ಇತ್ಯಾದಿ) ಪಡೆದುಕೊಳ್ಳುವ ಅವಕಾಶವೂ ಇರುವುದರಿಂದ ಜಾಹೀರಾತುದಾರರು ತಮ್ಮ ಅಭಿಯಾನವನ್ನು ಹೆಚ್ಚು ಪರಿಣಾಮಕಾರಿಯಾಗಿ ರೂಪಿಸುವುದು ಸಾಧ್ಯವಾಗುತ್ತದೆ ಎಂದು ಅವರು ಹೇಳುತ್ತಾರೆ. ತಮ್ಮ ಉತ್ಪನ್ನಗಳ ಬಗ್ಗೆ ಯಾರಿಗೆ ಆಸಕ್ತಿ ಇರಬಹುದು ಎಂದು ಅಂದಾಜಿಸಿ ಜಾಹೀರಾತುಗಳು ಹೆಚ್ಚಾಗಿ ಅಂತಹ ಗ್ರಾಹಕರನ್ನೇ ತಲುಪುವಂತೆ ಮಾಡುವುದು ('ಟಾರ್ಗೆಟೆಡ್ ಅಡ್ವರ್‌ಟೈಸಿಂಗ್') ಇದರಿಂದ ಸಾಧ್ಯವಾಗಲಿದೆಯಂತೆ.

ಅಂತೂ ಮೊಬೈಲ್ ಇದೀಗ ಕೇವಲ ಕರೆಮಾಡಲಿಕ್ಕೋ ಸಂದೇಶ ರವಾನಿಸಲಿಕ್ಕೋ ಬಳಕೆಯಾಗುವ ಸಾಧನವಾಗಷ್ಟೇ ಉಳಿದಿಲ್ಲ. ಹೊರಗಿನ ಜಗತ್ತಿನೊಡನೆ ವ್ಯವಹರಿಸುವ ಹೊಸಹೊಸ ಮಾರ್ಗಗಳನ್ನು ಪರಿಚಯಿಸುತ್ತಿರುವ ಈ ಮಾಯಾಸಾಧನ ಮುಂದೆ ಇನ್ನೇನನ್ನೆಲ್ಲ ನಮ್ಮ ಮುಂದೆ ತಂದಿಡಲಿದೆಯೋ, ಕಾದುನೋಡುವುದೊಂದೇ ದಾರಿ!

Saturday, 17 June 2017

ಇಂಟರ್ನೆಟ್ ನಲ್ಲೂ ಸುಳ್ಳು ಸುದ್ದಿಗಳು

ಇದು ಮಾಹಿತಿಯ ಯುಗ. ಎಲ್ಲ ಕಡೆಗಳಿಂದ ಎಲ್ಲ ಸಮಯದಲ್ಲೂ ನಮ್ಮತ್ತ ಮಾಹಿತಿಯ ಮಹಾಪೂರವೇ ಹರಿದು ಬರುತ್ತಿರುತ್ತದೆ.

ಒಂದು ನಿಮಿಷದ ಅವಧಿ ಬಹಳಷ್ಟು ಸಂದರ್ಭಗಳಲ್ಲಿ ನಮಗೆ ಕ್ಷುಲ್ಲಕವೆಂದು ತೋರುತ್ತದಲ್ಲ, ಇಷ್ಟೇ ಸಮಯ ಮಾಹಿತಿಯ ಲೋಕದಲ್ಲಿ ಅದೆಷ್ಟೋ ಚಟುವಟಿಕೆಗಳಿಗೆ ಸಾಕ್ಷಿಯಾಗಿರುತ್ತದೆ. ಫೇಸ್‌ಬುಕ್ ಗೋಡೆಯ ಮೇಲೆ ಒಂದು ನಿಮಿಷದ ಅವಧಿಯಲ್ಲಿ ಅದೆಷ್ಟೋ ಸಾವಿರ ಹೊಸ ಪೋಸ್ಟುಗಳು ಕಾಣಿಸಿಕೊಳ್ಳುತ್ತವೆ, ಹತ್ತಾರು ಲಕ್ಷ ಲೈಕುಗಳು ದಾಖಲಾಗುತ್ತವೆ. ಲಕ್ಷಗಟ್ಟಲೆ ಟ್ವೀಟುಗಳು, ವಾಟ್ಸ್‌ಆಪ್ ಸಂದೇಶಗಳು, ಇನ್ಸ್‌ಟಾಗ್ರಾಮಿನ ಚಿತ್ರಗಳು, ಯೂಟ್ಯೂಬ್ ವೀಡಿಯೋಗಳೆಲ್ಲ ಮಾಹಿತಿಯ ಈ ಮಹಾಪೂರಕ್ಕೆ ತಮ್ಮ ಕೊಡುಗೆ ಸಲ್ಲಿಸುತ್ತವೆ.

ಇಷ್ಟೆಲ್ಲ ಪ್ರಮಾಣದಲ್ಲಿ ಹರಿದುಬರುತ್ತದಲ್ಲ ಮಾಹಿತಿ, ಅದು ನಮ್ಮ ಬದುಕಿನಲ್ಲಿ ಗಮನಾರ್ಹ ಬದಲಾವಣೆಗಳನ್ನು ತಂದಿದೆ. ವಿಭಿನ್ನ ವಿಷಯಗಳನ್ನು ಕುರಿತ ಅರಿವು, ಹೊಸ ಒಳನೋಟಗಳನ್ನೆಲ್ಲ ಎಲ್ಲಿ ಯಾವಾಗ ಬೇಕಾದರೂ ಪಡೆದುಕೊಳ್ಳುವುದು ಸಾಧ್ಯವಾಗಿದೆ.

ಎಡೆಬಿಡದೆ ನಿರಂತರವಾಗಿ ಹರಿದುಬರುವ ಅಷ್ಟೂ ಮಾಹಿತಿ ಉಪಯುಕ್ತವಾದುದಾಗಿದ್ದರೆ ಹ್ಯಾಪಿ ಎಂಡಿಂಗ್ ಸಿನಿಮಾದಂತೆ ಒಳ್ಳೆಯದೇ ಆಯಿತು ಬಿಡಿ ಎನ್ನಬಹುದಿತ್ತು - ಜ್ಞಾನದ ಸಿರಿ ಎಷ್ಟಿದ್ದರೂ ಒಳ್ಳೆಯದೇ ತಾನೆ! ಆದರೆ ನೈಜ ಸ್ಥಿತಿ ಕೊಂಚ ಬೇರೆಯೇ:
ನಮ್ಮತ್ತ ಬರುವ ಮಾಹಿತಿಯ ಈ ಸಂಪತ್ತಿನಲ್ಲಿ ಖೋಟಾನೋಟುಗಳದು ಬಲುದೊಡ್ಡ ಹಾವಳಿ. 

ಹೌದು, ಫೇಸ್‌ಬುಕ್ - ವಾಟ್ಸ್‌ಆಪ್‌ಗಳಲ್ಲಿ ನಮಗೆ ಅದೆಷ್ಟೋ ಸುಳ್ಳುಗಳು ಕಾಣಸಿಗುತ್ತವೆ: ಕಂಪ್ಯೂಟರ್ ವೈರಸ್ಸುಗಳ ಬಗ್ಗೆ ಕಪೋಲಕಲ್ಪಿತ ಮಾಹಿತಿ, ನಮ್ಮ ರಾಷ್ಟ್ರಗೀತೆಗೆ ಯಾರೋ ಅವಾರ್ಡು ಕೊಟ್ಟರೆಂಬ ಹೆಮ್ಮೆ, ನಾಲ್ಕಾರು ದಿನ ಸೂರ್ಯನ ಬೆಳಕೇ ಇರುವುದಿಲ್ಲ ಎನ್ನುವ ಭಯೋತ್ಪಾದನೆ, ಅದೇನೇನೋ ಮಾಡಿದರೆ ಐಪ್ಯಾಡು ಉಚಿತವಾಗಿ ಸಿಗುತ್ತದೆ ಎನ್ನುವಂತಹ ಬೊಗಳೆ - ಇನ್ನೂ ಏನೇನೋ. ಆರೋಗ್ಯ ಮತ್ತು ಔಷಧಗಳಿಗೆ ಸಂಬಂಧಪಟ್ಟ ಸುಳ್ಳು ಇಲ್ಲವೇ ತಪ್ಪು ಮಾಹಿತಿಗಳೂ ದಂಡಿಯಾಗಿ ಸಿಗುತ್ತವೆ. ಏನೇನೋ ಸುಳ್ಳುಹೇಳಿ ವಂಚಿಸಲು ಪ್ರಯತ್ನಿಸುವವರೂ ಇಲ್ಲದಿಲ್ಲ.

ಜಾಲಲೋಕದಲ್ಲಿ ಕಂಡ ಮಾಹಿತಿಯನ್ನೆಲ್ಲ ಎಲ್ಲರಿಗೂ ಹಂಚಿಬಿಡುವ ಹವ್ಯಾಸ ನಮ್ಮಲ್ಲಿ ಅನೇಕರಿಗೆ ಇರುತ್ತದಲ್ಲ, ಅಂಥವರ ಮೂಲಕ ಈ ಸುಳ್ಳುಗಳೆಲ್ಲ ಹರಡುತ್ತಲೇ ಹೋಗುತ್ತದೆ. ಫೇಸ್‌ಬುಕ್‌ನಲ್ಲಿ ಶೇರ್ ಆಗುತ್ತವೆ, ವಾಟ್ಸ್‌ಆಪ್‌ನಲ್ಲಿ ಫಾರ್‌ವರ್ಡಿಸಲ್ಪಡುತ್ತವೆ.

ಆದರೆ ಜಾಲಲೋಕದ ಈ ಜೊಳ್ಳನ್ನು ನಂಬುವುದು ಮತ್ತು ಇತರರೊಡನೆ ಹಂಚಿಕೊಳ್ಳುವುದು - ಎರಡೂ ಶುದ್ಧ ತಪ್ಪು. ಅದರಿಂದಾಗಿ ಸಮಯ ಹಾಳಾಗುವುದು ಅಥವಾ ಆಪ್ತರಿಂದ ಬೈಸಿಕೊಳ್ಳುವ ಪ್ರಸಂಗ ಸೃಷ್ಟಿಯಾಗುವುದಷ್ಟೇ ಅಲ್ಲ, ಆರೋಗ್ಯಕ್ಕೆ ಸಂಬಂಧಿಸಿದಂತೆ ಸಿಕ್ಕಸಿಕ್ಕ ಸಲಹೆಯನ್ನೆಲ್ಲ ಪಾಲಿಸಹೋಗುವುದು ಹಾನಿಕಾರಕವೂ ಆಗಬಹುದು. ವಂಚಕರ ಬಲೆಗೆ ಬಿದ್ದರೆ ಕಿಸೆಗೂ ಕತ್ತರಿ ಗ್ಯಾರಂಟಿ!

ಹಾಗಾದರೆ ಹಂಚಲು ಹೊರಡುವ ಮೊದಲು ನಮಗೆ ಸಿಕ್ಕಿರುವ ಮಾಹಿತಿ ನಿಜವೋ ಸುಳ್ಳೋ ಎಂದು ಪತ್ತೆಹಚ್ಚುವುದು ಒಳ್ಳೆಯದು ಎಂದಾಯಿತು. ಆದರೆ ಈ ಕೆಲಸ ಮಾಡುವುದು ಹೇಗೆ?

ಯಾವುದೋ ರೋಗದಿಂದ ನರಳುತ್ತಿರುವ ನತದೃಷ್ಟ ಮಗುವಿನ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ನಿಮ್ಮ ಮಿತ್ರರು ಶೇರ್ ಮಾಡಿದ್ದಾರೆ ಎಂದುಕೊಳ್ಳೋಣ. ಈ ಚಿತ್ರವನ್ನು ಶೇರ್ ಮಾಡಿದಾಗಲೆಲ್ಲ ಆ ಮಗುವಿಗೆ ಒಂದು ಡಾಲರ್ ಸಿಗುತ್ತದೆ ಎನ್ನುವುದು ಅದರ ಜೊತೆಗಿರುವ ಸಂದೇಶ. ಇಂಥದ್ದನ್ನೆಲ್ಲ ಸುಮ್ಮನೆ ಹಂಚಿಕೊಳ್ಳುವ ಮೊದಲು ಹಾಗೆಲ್ಲಾದರೂ ಆಗುವುದು ಸಾಧ್ಯವೇ ಎಂದು ನಾವು ಯೋಚಿಸಬೇಕಾಗುತ್ತದೆ. ಇಂತಹ ಫೋಟೋಗಳನ್ನು ಎಷ್ಟು ಬಾರಿ ಶೇರ್ ಮಾಡಲಾಗುತ್ತದೆ ಎಂದು ಯಾರು - ಹೇಗೆ ಲೆಕ್ಕ ಇಡುತ್ತಾರೆ, ಅದಕ್ಕೆಲ್ಲ ಕೊಡಲು ದುಡ್ಡು ಎಲ್ಲಿಂದ ತರುತ್ತಾರೆ ಎಂದು ನಮ್ಮನ್ನೇ ಪ್ರಶ್ನಿಸಿಕೊಂಡರೂ ತಪ್ಪಿಲ್ಲ. 

ಯಾವುದೋ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿದರೆ ಒಂದು ಐಫೋನ್ ಉಚಿತವಾಗಿ ಸಿಗುತ್ತದೆ ಎಂದು ಬೊಗಳೆಬಿಡುವವರೂ ಅನೇಕರಿದ್ದಾರೆ. ಸುಮ್ಮನೆ ಲೈಕ್ ಮಾಡಿದವರಿಗೆಲ್ಲ ಒಂದೊಂದು ಐಫೋನ್ ಕೊಡಲು ಯಾರಿಗೆ ಸಾಧ್ಯ? ಹಾಗೊಮ್ಮೆ ಸಾಧ್ಯವಿದ್ದರೂ ಅವರು ಯಾಕೆ ಅಂತಹ ಪೆದ್ದುಕೆಲಸ ಮಾಡುತ್ತಾರೆ? ಎಂದೆಲ್ಲ ಯೋಚಿಸುತ್ತಿದ್ದಂತೆ ಈ ಹೇಳಿಕೆಯ ಬಂಡವಾಳವೆಲ್ಲ ಬಯಲಾಗಿಬಿಡುತ್ತದೆ. ಇದರ ಬದಲಿಗೆ ಹಿಂದೆಮುಂದೆ ಯೋಚಿಸದೆ ಲೈಕ್ ಒತ್ತಿದರೆ, ಆ ಪುಟವನ್ನು ಮಿತ್ರರೆಲ್ಲರ ಜೊತೆಗೆ ಹಂಚಿಕೊಂಡರೆ? ಎಷ್ಟು ಸಮಯ ಹಾಗೂ ಸಂಪನ್ಮೂಲ ವ್ಯರ್ಥ ಅಲ್ಲವೆ? ಪುಟಕ್ಕೆ ಪುಗಸಟ್ಟೆ ಲೈಕ್ ಗಿಟ್ಟಿಸಿ ತನ್ನ ಬೇಳೆ ಬೇಯಿಸಿಕೊಳ್ಳಲು ಹೊರಟವನಿಗೆ ವಿನಾಕಾರಣ ಬೆಂಬಲ ನೀಡಿದ ಪಾಪವೂ ನಿಮಗೇ. 

ಯಾವುದೋ ಚಿತ್ರಕ್ಕೆ ಕಮೆಂಟ್ ಮಾಡಿ, ಮ್ಯಾಜಿಕ್ ನೋಡಿ ಎನ್ನುವವರೂ ಹೀಗೆ ಲೈಕುಗಳನ್ನು ಸಂಪಾದಿಸುವ ಹಪಹಪಿಯಲ್ಲೇ ಇರುತ್ತಾರೆ. ಅಂಥದ್ದಕ್ಕೆಲ್ಲ ಪ್ರತಿಕ್ರಿಯೆ ನೀಡುವ ಮೂಲಕ ನಾವು ಮಾತ್ರ ಹಳ್ಳಕ್ಕೆ ಬೀಳುವುದಿಲ್ಲ, ನಾನು ಇದೊಂದು ಲೈಕ್ ಮಾಡಿದ್ದೇನೆ ನೋಡಿ ಎಂದು ನ್ಯೂಸ್‌ ಫೀಡಿನಲ್ಲಿ ಪ್ರಚಾರ ಕೊಟ್ಟು ಅವರನ್ನೂ ಹಳ್ಳಕ್ಕೆ ತಳ್ಳಲು ಪ್ರಯತ್ನಿಸುತ್ತೇವೆ!   

ತಂತ್ರಜ್ಞಾನದ ಹೆಸರಿನಲ್ಲಿ ನಮಗೆ ಕತೆಹೇಳುವವರನ್ನು ಕಣ್ಣುಮುಚ್ಚಿ ನಂಬುವ ಅಗತ್ಯವೂ ಇಲ್ಲ. "ಕಳ್ಳರು ಬಲವಂತವಾಗಿ ಎಟಿಎಂಗೆ ಕರೆದೊಯ್ದರೆ ನಿಮ್ಮ ಪಿನ್ ಅನ್ನು ತಿರುಗುಮುರುಗಾಗಿ ಒತ್ತಿ, ಅದು ಪೊಲೀಸರಿಗೆ ಮಾಹಿತಿ ತಲುಪಿಸುತ್ತದೆ" ಎಂದು ಹೇಳುವವರನ್ನು ನೀವೂ ಕೇಳಿ: ನನ್ನ ಪಿನ್ ೧೦೦೧ ಆಗಿದ್ದರೆ ಅದನ್ನು ತಿರುಗುಮುರುಗಾಗಿ ಒತ್ತುವುದು ಹೇಗೆ? ಎಟಿಎಂನಿಂದ ದುಡ್ಡು ಸಿಕ್ಕ ಮೇಲೂ ಪೊಲೀಸರು ತಲುಪುವ ತನಕ ಕಳ್ಳರು ಅಲ್ಲೇ ಇರುತ್ತಾರೆ ಎನ್ನಲು ಏನು ಗ್ಯಾರಂಟಿ?? (ಅಂದಹಾಗೆ ಇಂತಹುದೊಂದು ತಂತ್ರಜ್ಞಾನವನ್ನು ಅಳವಡಿಸುವುದು ಸೈದ್ಧಾಂತಿಕವಾಗಿ ಸಾಧ್ಯವಿದ್ದರೂ ಮೇಲೆ ಕೇಳಿದಂತಹ ಪ್ರಶ್ನೆಗಳು ಇನ್ನೂ ಪ್ರಸ್ತುತವಾಗಿರುವುದರಿಂದ ಅದನ್ನು ಪ್ರಾಯೋಗಿಕವಾಗಿ ಬಳಸಲಾಗುತ್ತಿಲ್ಲ)

ಇದೆಲ್ಲ ನೇರಾನೇರ ಖೊಟ್ಟಿ ವಿಷಯಗಳ ಮಾತಾಯಿತು. ಆದರೆ ನಮ್ಮ ಕಣ್ಣಿಗೆ ಬೀಳುವ ಕೆಲ ಸಂದೇಶಗಳ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಲು ಅಗತ್ಯವಾದ ಮಾಹಿತಿ ನಮ್ಮಲ್ಲಿ ಇಲ್ಲದಿರುವ ಸಾಧ್ಯತೆಯೂ ಇದೆ. ನಾವು ದಿನನಿತ್ಯ ಬಳಸುವ ಯಾವುದೋ ವಸ್ತು ಭಯಂಕರ ಕಾಯಿಲೆಗೆ ರಾಮಬಾಣ ಅಂತಲೋ ಅದಾವುದೋ ಗುಡ್ಡದ ಮೇಲೆ ಬಿಟ್ಟಿರುವ ಹೂವು ಬೆತ್ತಲೆ ಹೆಣ್ಣಿನಂತೆ ಕಾಣುತ್ತದೆ ಅಂತಲೋ ಹೇಳುವ ಸಂದೇಶ ಕಣ್ಣಿಗೆ ಬಿತ್ತು ಎಂದುಕೊಳ್ಳಿ. ಅದರಲ್ಲಿರುವ ವಿಷಯ ನಿಜವೋ ಸುಳ್ಳೋ ಎನ್ನುವುದು ತಕ್ಷಣಕ್ಕೆ ಗೊತ್ತಾಗದಿದ್ದರೆ ನಾವು ಗೂಗಲ್ ಮೊರೆಹೋಗಬಹುದು, ಇಲ್ಲವೇ ಇಂತಹ ಸಂದೇಶಗಳನ್ನು ವಿಶ್ಲೇಷಿಸಿ ಅವು ಸುಳ್ಳೋ ನಿಜವೋ ಎಂದು ತಿಳಿಸುವ ಜಾಲತಾಣಗಳಿಗೂ ಭೇಟಿಕೊಡಬಹುದು.

snopes.com, hoax-slayer.com ಮೊದಲಾದವು ಈ ಬಗೆಯ ಜಾಲತಾಣಗಳಿಗೆ ಉದಾಹರಣೆಗಳು. ಎಲ್ಲೋ ಪ್ರಾರಂಭವಾಗಿ ಫಾರ್‌ವರ್ಡ್ ಆಗುತ್ತ ಆಗುತ್ತ ನಮ್ಮವರೆಗೂ ಬಂದು ತಲುಪುವ ಸಂದೇಶಗಳಲ್ಲಿ ನಿಜ ಎಷ್ಟಿದೆ ಹಾಗೂ ಸುಳ್ಳು ಎಷ್ಟಿದೆ ಎನ್ನುವ ವಿಷಯ ಸಾಮಾನ್ಯವಾಗಿ ಈ ತಾಣಗಳಲ್ಲಿ ಸಿಕ್ಕಿಬಿಡುತ್ತದೆ. 

ಕೆಲವೊಮ್ಮೆ ನಕಲಿ ಫೋಟೋಗಳು ಕೂಡ ಇಮೇಲ್, ಫೇಸ್‌ಬುಕ್, ವಾಟ್ಸ್‌ಆಪ್‌ಗಳ ಮೂಲಕ ಹರಿದಾಡುವುದುಂಟು. ಈ ಚಿತ್ರಗಳು ಫೋಟೋಶಾಪ್ ಸೃಷ್ಟಿಯಾಗಿದ್ದರೂ ಕೂಡ ಸುಳ್ಳು ಮಾಹಿತಿಯ ಕತೆ ಹೆಣೆದು ಅವು ನೈಜ ಚಿತ್ರಗಳೇ ಎನ್ನುವಂತೆ ಬಿಂಬಿಸಲು ಪ್ರಯತ್ನಿಸಲಾಗಿರುತ್ತದೆ.

ಇಂತಹ ಯಾವುದೇ ಚಿತ್ರವನ್ನು ನೋಡಿದಾಕ್ಷಣ ಅದು ಅಸಹಜವಾಗಿದೆ ಎನ್ನಿಸಿದರೆ ಅದರ ಸತ್ಯಾಸತ್ಯತೆಯನ್ನೂ ತಿಳಿದುಕೊಳ್ಳಬಹುದು. ಗೂಗಲ್‌ನ 'ಸರ್ಚ್ ಬೈ ಇಮೇಜಸ್' ಆಯ್ಕೆಯಲ್ಲಿ (images.google.com) ಅಂತಹ ಚಿತ್ರವನ್ನು ಅಪ್‌ಲೋಡ್ ಮಾಡಿದರೆ ಅದು ಯಾವೆಲ್ಲ ಜಾಲತಾಣಗಳಲ್ಲಿ ಪ್ರಕಟವಾಗಿದೆ ಎಂದು ನೋಡಬಹುದು; ಅಷ್ಟೇ ಅಲ್ಲ, ಆ ಚಿತ್ರಗಳ ಜೊತೆಗೆ ಕಾಣಿಸಿಕೊಳ್ಳುವ ಲೇಖನಗಳನ್ನು ಗಮನಿಸಿದರೆ ಚಿತ್ರದ ಮೂಲದ ಬಗೆಗೂ ಸುಮಾರಾಗಿ ತಿಳಿದುಕೊಳ್ಳಬಹುದು.

ಇಂತಹ ಸಂದೇಶಗಳ ಬಗ್ಗೆ ಮಾತನಾಡುವಾಗ ನಮಗೆ ಎದುರಾಗುವ ಇನ್ನೊಂದು ಪ್ರಶ್ನೆ - ಇದನ್ನೆಲ್ಲ ಯಾರು ಮತ್ತು ಏಕೆ ಸೃಷ್ಟಿಸುತ್ತಾರೆ?

ಯಾವುದೋ ಕೃತ್ರಿಮ ಸಂದೇಶ ನಮ್ಮನ್ನು ವಂಚಿಸಿ ಹಣಕೀಳಲು ಪ್ರಯತ್ನಿಸುತ್ತಿದ್ದರೆ ಅದನ್ನು ತಯಾರಿಸಿದವರ ಉದ್ದೇಶ ಸ್ಪಷ್ಟ: ಅವರು ತೋಡಿದ ಹಳ್ಳಕ್ಕೆ ನಾವು ಬಿದ್ದರೆ ಅವರಿಗೆ ಲಾಭ. ಆದರೆ ಸುಳ್ಳು ಮಾಹಿತಿಯನ್ನು ಹರಡುವವರ ಉದ್ದೇಶ ಏನಿರುತ್ತದೆ? ಇಲ್ಲದ ವೈರಸ್ಸಿನ ಹೆಸರಿನಲ್ಲಿ ನಮ್ಮನ್ನು ಹೆದರಿಸಿದರೆ, ಸೂರ್ಯ ಮರೆಯಾಗುತ್ತಾನೆಂದು ಭಯಹುಟ್ಟಿಸಿದರೆ ಅವರಿಗೇನು ಲಾಭ?

ಈ ಪ್ರಶ್ನೆಗೆ ಉತ್ತರಿಸುವುದು ಕೊಂಚ ಕಷ್ಟವೇ. ಕೆಲವೊಮ್ಮೆ ಇಂತಹ ಸಂದೇಶಗಳನ್ನು ಕುಚೇಷ್ಟೆಗೆಂದು ಉದ್ದೇಶಪೂರ್ವಕವಾಗಿಯೇ ಸೃಷ್ಟಿಸಲಾಗಿರುತ್ತದೆ. ಸ್ನೇಹಿತರ ಬಳಗವನ್ನು ಏಮಾರಿಸುವ ಉದ್ದೇಶದಿಂದ ತಯಾರಾದ ಸಂದೇಶಗಳು ಮೂಲ ಸೃಷ್ಟಿಕರ್ತನ ನಿಯಂತ್ರಣ ಮೀರಿ ಹೊರಪ್ರಪಂಚವನ್ನು ತಲುಪುವುದೂ ಉಂಟು. ಯಾವುದೋ ಮಾಹಿತಿಯನ್ನು ತಪ್ಪಾಗಿ ಅರ್ಥೈಸಿಕೊಂಡು (ಉದಾ: ಹಾಸ್ಯವನ್ನು ನಿಜವೆಂದು ತಿಳಿದು) ಈ ಬಗೆಯ ಸಂದೇಶಗಳನ್ನು ಬರೆದಿರುವುದೂ ಸಾಧ್ಯ. ಇನ್ನು ಕೆಲ ಸನ್ನಿವೇಶಗಳಲ್ಲಿ ಯಾವುದೋ ವ್ಯಕ್ತಿ, ಸಂಸ್ಥೆ  ಅಥವಾ ಸಮುದಾಯದ ಬಗ್ಗೆ ಅಪಪ್ರಚಾರ ಮಾಡಲು - ದ್ವೇಷ ಸಾಧಿಸಲು ಕೂಡ ಸುಳ್ಳು ಮಾಹಿತಿಯನ್ನು ಸೃಷ್ಟಿಸಲಾಗಿರುತ್ತದೆ. ಕೆಲವು ಸುಳ್ಳುಗಳ ಹಿಂದೆ ಸಮಾಜದ ಶಾಂತಿ ಕದಡುವ, ಅಸ್ಥಿರತೆ ಸೃಷ್ಟಿಸುವ ಉದ್ದೇಶಗಳೂ ಇರಬಹುದು.  

ಈ ಪಿಡುಗನ್ನು ನಿವಾರಿಸುವುದು ಹೇಗೆ? ಈ ಪ್ರಶ್ನೆಗೆ ಸುಲಭವಾಗಿಯೇ ಉತ್ತರಿಸಬಹುದು. ಏಕೆಂದರೆ ಇಂತಹ ಸುಳ್ಳುಗಳೆಲ್ಲ ಜೀವಂತವಾಗಿರುವುದು ಅವನ್ನು ಹಂಚುವವರು ಇರುವವರೆಗೆ ಮಾತ್ರ. ಯಾವಾಗ ನಾವು ಸಿಕ್ಕಸಿಕ್ಕ ಮಾಹಿತಿಯನ್ನೆಲ್ಲ ಹಿಂದೆಮುಂದೆ ಯೋಚಿಸದೆ ಫಾರ್‌ವರ್ಡ್ ಮಾಡುವುದನ್ನು, ಶೇರ್ ಮಾಡುವುದನ್ನು ನಿಲ್ಲಿಸುತ್ತೇವೆಯೋ ಆಗ ಈ ಸುಳ್ಳುಗಳ ಹರಡುವಿಕೆಯೂ ನಿಂತುಹೋಗುತ್ತದೆ; ಸಮಯ - ಹಣ - ಸಂಪನ್ಮೂಲಗಳ ಅಪವ್ಯಯವೂ ತಪ್ಪುತ್ತದೆ. ಹಾಗಾಗಿ, ಸಿಕ್ಕಿದ್ದನ್ನೆಲ್ಲ ಶೇರ್ ಮಾಡುವ ಮೊದಲು, ಖಂಡಿತಾ, ಒಮ್ಮೆ ಯೋಚಿಸಿ. ಹಾಗೆಯೇ ನಿಮ್ಮ ಪರಿಚಿತರಲ್ಲಿ ಯಾರಾದರೂ ಶೇರ್ ವೀರರಿದ್ದರೆ ಅವರಿಗೂ ಒಮ್ಮೆ ತಿಳಿಹೇಳಿ!



>ನಿಮಿಷವೊಂದಕ್ಕೆ ಫೇಸ್‌ಬುಕ್‌ನಲ್ಲಿ ದಾಖಲಾಗುವ ಲೈಕುಗಳ ಸಂಖ್ಯೆ (೨೦೧೫ರ ಆಗಸ್ಟ್‌ನಲ್ಲಿದ್ದಂತೆ) ನಲವತ್ತೊಂದು ಲಕ್ಷಕ್ಕೂ ಹೆಚ್ಚು. ಅಷ್ಟೇ ಸಮಯದಲ್ಲಿ ಟ್ವಿಟ್ಟರಿನಲ್ಲಿ ಮೂರೂವರೆಲಕ್ಷದಷ್ಟು ಟ್ವೀಟುಗಳು ಹಾರುತ್ತವೆ, ಮುನ್ನೂರು ಗಂಟೆಗಳಷ್ಟು ಅವಧಿಯ ವೀಡಿಯೋ ಯೂಟ್ಯೂಬ್‌ ಸೇರುತ್ತದೆ.

 >ಎಸ್ಸೆಮ್ಮೆಸ್ ಅಥವಾ ವಾಟ್ಸ್‌ಆಪ್ ಮೆಸೇಜನ್ನು ಒಂದಷ್ಟು ಜನಕ್ಕೆ ಕಳುಹಿಸಿದರೆ ಉಚಿತ ಟಾಕ್‌ಟೈಮ್ ಸಿಗುತ್ತದೆ ಎನ್ನುತ್ತಾರಲ್ಲ, ನಮ್ಮ ಮೊಬೈಲ್ ಪ್ರೀಪೇಯ್ಡೋ ಪೋಸ್ಟ್ ಪೇಯ್ಡೋ ಎನ್ನುವುದು ಅವರಿಗೆ ಹೇಗೆ ಗೊತ್ತಾಗುತ್ತದೆ? ವಾಟ್ಸ್‌ಆಪ್ ಮೆಸೇಜು ಕಳುಹಿಸಿದ ಮಾತ್ರಕ್ಕೆ ಮೊಬೈಲಿನ ಬ್ಯಾಟರಿ ಚಾರ್ಜ್ ಆಗುವಂತಿದ್ದರೆ ಇಷ್ಟೆಲ್ಲ ಚಾರ್ಜರುಗಳು - ಪವರ್‌ಬ್ಯಾಂಕುಗಳು ಇರುವುದಾದರೂ ಏಕೆ?? ಇಂತಹ ಪ್ರಶ್ನೆಗಳನ್ನೆಲ್ಲ ನಮ್ಮನ್ನು ನಾವೇ ಕೇಳಿಕೊಂಡರೆ ಸುಳ್ಳು ಮಾಹಿತಿಯ ಸಮಸ್ಯೆ ಅದೆಷ್ಟೋ ಕಡಿಮೆಯಾಗುತ್ತದೆ. ದುರುದ್ದೇಶಪೂರಿತ ‌ಪೇಜ್‌ಗಳನ್ನು ಸೃಷ್ಟಿಸುವುದು, ಸುಳ್ಳುಹೇಳಿ ಸಾವಿರಗಟ್ಟಲೆ ಲೈಕ್ ಸಂಪಾದಿಸುವುದು ಹಾಗೂ ಆ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ತಮ್ಮ ಗೋಲ್‌ಮಾಲ್ ಮುಂದುವರೆಸುವುದು ಫೇಸ್‌ಬುಕ್‌ನಲ್ಲಿ ಇದೀಗ ಬಲುದೊಡ್ಡ ದಂಧೆ - 'ಲೈಕ್ ಫಾರ್ಮಿಂಗ್' ಎನ್ನುವುದು ಇದರ ಹೆಸರು.ನಿಮ್ಮ ಹೆಸರಿನ ಅರ್ಥ, ಫೋಟೋ ವಿಶ್ಲೇಷಣೆ, ಪ್ರೊಫೈಲ್ ವೀಕ್ಷಿಸಿದವರ ವಿವರ, ನಿಮ್ಮನ್ನು ಪ್ರೀತಿಸುತ್ತಿರುವವರ ಹೆಸರನ್ನೆಲ್ಲ ಹೇಳುವುದಾಗಿ ಜಂಬಕೊಚ್ಚುವ ಫೇಸ್‌ಬುಕ್ ಆಪ್‌ಗಳನ್ನು ನೀವು ನೋಡಿರಬಹುದು; ಅವನ್ನು ಉಪಯೋಗಿಸಿ ತಲೆಬುಡವಿಲ್ಲದ ಫಲಿತಾಂಶಗಳನ್ನೂ ಪಡೆದಿರಬಹುದು. ಇಂತಹ ಆಪ್‌ಗಳ ಉಪಯೋಗ ಏನು, ಅವನ್ನು ಯಾರು ಏಕೆ ಸೃಷ್ಟಿಸುತ್ತಾರೆ ಎಂದು ಯೋಚಿಸಿಲ್ಲದಿದ್ದರೆ ಮುಂದಿನ ಬಾರಿ ಖಂಡಿತಾ ಯೋಚಿಸಿ. ಏಕೆಂದರೆ ಇಂತಹ ಬಹಳಷ್ಟು ಆಪ್‌ಗಳು ನಿಮ್ಮ ಖಾಸಗಿ ಮಾಹಿತಿಯನ್ನು ಕದಿಯಲು ಪ್ರಯತ್ನಿಸುತ್ತಿರುತ್ತವೆ, ನಿಮ್ಮ ಮಿತ್ರರಿಗೆಲ್ಲ ಸಂದೇಶ ಕಳುಹಿಸಿ ಅವರಿಗೂ ಗಾಳಹಾಕಲು ಪ್ರಯತ್ನಿಸುತ್ತವೆ!ಜಾಲಲೋಕದಲ್ಲಿ ಹರಿದಾಡುವ ಸುಳ್ಳು ಇಲ್ಲವೇ ತಪ್ಪು ಮಾಹಿತಿಯ ಕೆಲ ಉದಾಹರಣೆಗಳನ್ನು ಪ್ರತಿವಾರವೂ ಪ್ರಕಟಿಸುತ್ತಿದ್ದ ವಾಷಿಂಗ್ಟನ್ ಪೋಸ್ಟ್ ಪತ್ರಿಕೆ ಇತ್ತೀಚೆಗೆ ಆ ಅಂಕಣವನ್ನು ನಿಲ್ಲಿಸಿತು. ಮೊದಲಿಗೆ ತಮಾಷೆಯಾಗಿಯೋ ಹಾಸ್ಯಾಸ್ಪದವಾಗಿಯೋ ಮಾತ್ರವೇ ತೋರುತ್ತಿದ್ದ ಸುಳ್ಳು ಮಾಹಿತಿ ಇದೀಗ ಹಣಸಂಪಾದನೆ ಹಾಗೂ ದ್ವೇಷಸಾಧನೆಯ ಮಾರ್ಗವಾಗಿಯೂ ಬಳಕೆಯಾಗುತ್ತಿರುವ ಬಗ್ಗೆ ಕೊನೆಯ ಅಂಕಣದಲ್ಲಿ ಹಂಚಿಕೊಂಡಿರುವ ವಿವರಗಳು (https://goo.gl/KpAMBW) ನಿಜಕ್ಕೂ ಚಿಂತನೆಗೆ ಹಚ್ಚುವಂತಿವೆ.

ಆ್ಯಂಡ್ರಾಯಿಡ್ ಪೋನ್ ಗೆ ಆ್ಯಂಟಿವೈರಸ್ ಬೇಕಾ?

ಆ್ಯಂಡ್ರಾಯಿಡ್ ಪೋನ್ ಗೆ ಆ್ಯಂಟಿವೈರಸ್ ಬೇಕಾ?

ಇಂಟರ್‍ನೆಟ್ ನಲ್ಲಿ ಪ್ಲೇ ಸ್ಟೋರ್ ನಲ್ಲಿಯೂ ಆ್ಯಂಟಿವೈರಸ್ ಅಂತ ಹುಡುಕಿದರೆನೂರಾರು ಆ್ಯಂಟಿವೈರಸ್ ಗಳು ಸಿಗುತ್ತವೆ ಅದರಲ್ಲೂ ಕೆಲವು ತಿಂಗಳಿಗೆ ಇಷ್ಟು ಅಂತ ಹಣ ಕೇಳುತ್ತವೆ, ತಿಂಗಳಿಗೆ ನೂರಾರು ರೂಪಾಯಿ ಕೀಳುವ ಆ್ಯಂಟೀ ವೈರಸ್ ಗಳು ನಿಜವಾಗಯೂ ಕೆಲಸ ಮಾಡುತ್ತವಾ? ಖಂಡಿತಾ ಇಲ್ಲ!!

ನಿಮ್ಮ ಆ್ಯಂಡ್ರಾಯಿಡ್ ಪೋನ್ ಗೆ ಆ್ಯಂಟಿವೈರಸ್ ನ ಅವಶ್ಯಕತೆ ಇರುವುದಿಲ್ಲ ಗೂಗಲ್ ತನ್ನ OS ತಯಾರಿಸುವಾಗ ಇದರ ಬಗ್ಗೆ ಅತಿ ಹೆಚ್ಚು ಗಮನಹರಿಸಿ ಮೊಬೈಲ್ ಗೆ ತನ್ನದೇ ಆದ ರಕ್ಷಣೆ ನೀಡಿರುತ್ತದೆ, ( ಮೊನ್ನೆ ಗೂಗಲ್ ನವರು ತಮ್ಮ ಆಂಡ್ರಾಯಿಡ್ OS ನಲ್ಲಿ ದೋಷ ಹುಡುಕಿದವರಿಗೆ ಕೋಟಿ ರೂಪಾಯಿ ಕೊಡುವುದಾಗಿ ಘೋಷಿಸಿದೆ ) ಹಾಗಾಗಿ ಆ್ಯಂಟಿವೈರಸ್ ನ ಅವಶ್ಯಕತೆ ಆ್ಯಂಡ್ರಾಯಿಡ್ ಪೋನ್ ಗೆ ಇಲ್ಲ!!

ಪ್ಲೇ ಸ್ಟೋರ್ ನಲ್ಲಿರುವ ಆ್ಯಂಟಿವೈರಸ್ ಗಳು ಕೇವಲ ನಿಮ್ಮ ಪೋನ್ ನಲ್ಲಿರುವ Cache clear ಮಾಡಿ ಏನೋ ಸಾದನೆ ಮಾಡಿರುವ ಹಾಗೆ ಬೀಗುತ್ತವೆ, ಅಂದಹಾಗೆ ಈ Cache ಅಂದ್ರೆ ಏನು ಅದನ್ನ ಕ್ಲಿಯರ್ ಮಾಡೋದ್ರಿಂದ ಏನಾದ್ರೂ ಲಾಭ ಇದೆಯಾ ಅಂತ ನಾಳೆ ನೋಡೋಣ

ವಾಟ್ಸ್‌ ಆ್ಯಪ್‌ನಿಂದ ಗುಪ್ತ ಫಾಂಟ್‌

ಮಾಹಿತಿ ವಿನಿಮಯ ಕ್ಷೇತ್ರದಲ್ಲಿ ತನ್ನದೇ ವೈಶಿಷ್ಟ್ಯಗಳಿಂದಾಗಿ 1 ಬಿಲಿಯನ್‌ ಗ್ರಾಹಕರನ್ನು ಹೊಂದಿರುವ ವಾಟ್ಸಪ್‌ ಇದೀಗ ‘ಫಿಕ್ಸ್‌ಡ್‌ಸಿಸ್‌’ ಎಂಬ ಗುಪ್ತ ಫಾಂಟನ್ನು ಪರಿಚಯಿಸಿದೆ. ಈ ಮಾದರಿಯ ಲಿಪಿ ಈಗಾಗಲೇ ಸಾಮಾನ್ಯವಾಗಿ ವಿಂಡೋಸ್‌ನ ನೋಟ್‌ ಪ್ಯಾಡ್‌ ಮತ್ತು ಇದಕ್ಕೂ ಮುನ್ನ ಆ್ಯಂಡ್ರಾಯಿಡ್‌ ಬೇಟಾ ಮಾದರಿಯ ಮೊಬೈಲ್‌`ಗಳಲ್ಲಿ ಬಳಕೆ ಮಾಡಲಾಗಿತ್ತು.
ಈ ನೂತನ ಫಾಂಟ್‌ ಅನ್ನು ಬಳಸಲು ಸಾಮಾನ್ಯ ಫಾಂಟ್‌ನಲ್ಲಿ ಮೊದಲು ಬರೆದು, ಬಳಿಕ ಬದಲಾಯಿಸಬೇಕಾದ ಫಾಂಟ್‌ನ ಚಿಹ್ನೆಯನ್ನು ಮೂರು ಬಾರಿ ಬಳಸಬೇಕು. ಬೋಲ್ಡ್‌, ಇಟಾಲಿಕ್‌ ಫಾಂಟ್‌ ಹೊರತುಪಡಿಸಿ ವಿಶಿಷ್ಟರೀತಿಯ ಸೌಲಭ್ಯಗಳನ್ನು ವಾಟ್ಸಪ್‌ ಮೆಸೆಂಜರ್‌ ಅಪ್ಲಿಕೇಶನ್‌ ಬಿಡುಗಡೆ ಮಾಡಿದೆ. ವಿಡಿಯೋ ಕಾಲಿಂಗ್‌ನಂಥ ಸೇವೆಗಳು ಸಹ ಶೀಘ್ರದಲ್ಲೇ ಸೇರ್ಪಡೆಗೊಳ್ಳಲಿವೆ.

ಆ್ಯಂಡ್ರಾಯಿಡ್ ಕೆಲ ಉಪಯೋಗಗಳು

ಈಗ ಎಲ್ಲರ ಕೈಯಲ್ಲೂ ಆ್ಯಂಡ್ರಾಯಿಡ್ ಮೊಬೈಲ್ ಇದೆ. ಆದರೆ, ಬಹುತೇಕರಿಗೆ ಈ ಫೋನ್ ಅನ್ನು ಯಾವ ರೀತಿ ಬಳಸಬಹುದು, ಅದರ ಉಪಯೋಗಗಳೇನು ಎಂಬ ಮಾಹಿತಿಯೇ ಇಲ್ಲ. ಈ ಕುರಿತು ಮಾಹಿತಿ. 
ಪಿಸಿ ಕಂಟ್ರೋಲ್ 
ಬಹುತೇಕ ಮಂದಿ ಇ- ಮೇಲ್ ಮತ್ತು ಇತರೆ ಡಾಕ್ಯುಮೆಂಟ್‌ಗಳನ್ನು ನೋಡಲಷ್ಟೇ ಸ್ಮಾರ್ಟ್‌ಫೋನ್ ಬಳಸುತ್ತಾರೆ. ಒಂದು ವೇಳೆ ನಿಮ್ಮ ಕಂಪ್ಯೂಟರ್ ಅನ್ನು ಮೊಬೈಲ್ ಮೂಲಕ ನಿಯಂತ್ರಿಸುವುದು ಸಾಧ್ಯವಿದ್ದರೆ? ಖಂಡಿತಾ ಸಾಧ್ಯವಿದೆ. ವರ್ಚುವಲ್ ನೆಟ್‌ವರ್ಕ್ ಕಂಪ್ಯೂಟಿಂಗ್‌ನಂತಹ ಆ್ಯಪ್‌ಗಳು ಕಂಪ್ಯೂಟರ್ ಅನ್ನು ಸ್ಮಾರ್ಟ್‌ಫೋನ್ ಡಿಸ್ಪ್ಲೇ ಮೂಲಕ ನೋಡಲು ಅವಕಾಶ ನೀಡುತ್ತವೆ. ಅಲ್ಲದೆ, ನಿಮ್ಮ ಮೊಬೈಲ್‌ನಲ್ಲೇ ಫೈಲ್ ಕನ್‌ವರ್ಷನ್, ಇಮೇಲ್ ಮತ್ತು ಇತರೆ ಕೆಲಸಗಳನ್ನೂ ಮಾಡಬಹುದು. ವಿಎಲ್‌ಸಿ ಡೈರೆಕ್ಟ್ ಪ್ರೋ ಫ್ರೀ ಎನ್ನುವ ಇನ್ನೊಂದು ಆ್ಯಪ್ ಬಳಸಿಕೊಂಡು ನಿಮ್ಮ ಪಿಸಿಯಲ್ಲಿರುವ ವೀಡಿಯೋ ವೀಕ್ಷಿಸಬಹುದು.
ಹೋಮ್ ಸ್ಕ್ರೀನ್‌ಗೆ
 ಸ್ಮಾರ್ಟ್‌ಫೋನ್‌ಗಳು ಕೆಲವೊಮ್ಮೆ ಕ್ಲಿಷ್ಟಕರ ಅನಿಸಬಹುದು.  ಶಾರ್ಟ್‌ಕಟ್‌ಗಳ ಅರಿವಿದ್ದರೆ ಎಲ್ಲವೂ ಸುಲಭ. ಉದಾಹರಣೆಗೆ ನಿಮ್ಮ ಸ್ಮಾರ್ಟ್‌ಫೋನ್‌ನ ಖಾಲಿ ಜಾಗವನ್ನು ಬೆರಳಿನಿಂದ ಒತ್ತಿ ಹಿಡಿಯಿರಿ. ಆಗ ಪಾಪ್ ಅಪ್ ಮೆನು ಡಿಸ್ಪ್ಲೇ ಆಗುತ್ತದೆ. ಅಲ್ಲಿಂದ ಶಾರ್ಟ್‌ಕಟ್ಸ್‌ಗೆ ಹೋಗಿ. ಬಳಿಕ ಕಾಂಟ್ಯಾಕ್ಟ್ ಸೆಲೆಕ್ಟ್ ಮಾಡಿ. ಅಲ್ಲಿ ನೀವು ಹೊಸ ಕಾಂಟ್ಯಾಕ್ಟ್ ಸೇರಿಸಬಹುದು.
ಅಳತೆ ಮಾಡಬಹುದು
 ನೀವು ಎಲ್ಲಿಗೋ ಹೊರಗೆ ಯಾವುದೋ ಕಟ್ಟಡ ಅಥವಾ ವಸ್ತು ನೋಡಿರುತ್ತೀರಿ. ಆದರೆ, ನಿಮ್ಮ ಕೈಯಲ್ಲಿ ಅಳತೆ ಟೇಪ್ ಇರುವುದಿಲ್ಲ. ಆಗ ಯಾವುದಾದರೂ ವಸ್ತುವಿನ ಎತ್ತರ ಅಳತೆ ಮಾಡಬೇಕಾದರೆ ಏನು ಮಾಡುತ್ತೀರಿ? ಸ್ಮಾರ್ಟ್ ಮೆಷರ್ ಪ್ರೊ ಎನ್ನುವ ಆ್ಯಪ್ ಇದ್ದರೆ ಮೊಬೈಲ್ ಕ್ಯಾಮೆರಾದಲ್ಲೇ ಅಳತೆ ತೆಗೆಯಬಹುದು.
 
ಬೆಳಕು ಕಡಿಮೆ ಮಾಡಲು
 ಕತ್ತಲೆಯಲ್ಲಿ ಸ್ಮಾರ್ಟ್‌ಫೋನ್ ಬಳಸುವಾಗ ಎಕ್ಸ್‌ಟರ್ನಲ್ ಬ್ಯಾಗ್ರೌಂಡ್ ಇಲ್ಲದೆ ಸ್ಕ್ರೀನ್ ನೋಡುವುದು ಕಿರಿಕಿರಿಯೆನಿಸಬಹುದು. ತುಂಬಾ ಹೊತ್ತು ಹೀಗೇ ಮೊಬೈಲ್ ಬಳಸಿದರೆ ಕಣ್ಣು ನೋವು ಬರಬಹುದು. ಈ ಸಮಸ್ಯೆಗೆ ಪರಿಹಾರ ಬೇಕಿದ್ದರೆ ಸೆಟ್ಟಿಂಗ್ಸ್‌ಗೆ ಹೋಗಿ. ಅಲ್ಲಿ ಎಸ್ಸೆಸೆಬಿಲಿಟಿ, ನಂತರ ಇನ್‌ವರ್ಟೆಡ್ ರೆಂಡರಿಂಗ್ ಆಯ್ಕೆ ಮಾಡಿ. ಮತ್ತೆ ಕಣ್ಣುನೋವು ಕಾಡದು. 
ಆ್ಯಪ್‌ಗಳ ನಿಯಂತ್ರಣ 
ಹೋಮ್‌ಸ್ಕ್ರೀನ್‌ನಲ್ಲಿ ಎಲ್ಲಾ ಆ್ಯಪ್‌ಗಳು ಡಿಸ್ಪ್ಲೇ ಆಗುವುದು ಕೆಲವರಿಗೆ ಇಷ್ಟವಾಗುವುದಿಲ್ಲ. ಇಂಥವರಿಗಾಗಿಯೇ ಆ್ಯಂಡ್ರಾಯಿಡ್‌ನಲ್ಲಿ ವಿಶೇಷ ಸೌಲಭ್ಯವೊಂದಿದೆ. ಇದಕ್ಕಾಗಿ ಗೂಗಲ್ ಪ್ಲೇಸ್ಟೇಷನ್ ತೆರೆಯಿರಿ. ನಂತರ ಫೋನ್‌ನ ಮೆನುಗೆ ಹೋಗಿ. ನಂತರ ಸೆಟ್ಟಿಂಗ್ಸ್‌ನಲ್ಲಿ ಅಟೋ ಆ್ಯಡ್- ವಿಡ್ಜೆಟ್ ಕ್ಯಾನ್ಸಲ್ ಮಾಡಿ. ಸಮಸ್ಯೆ ನಿವಾರಣೆಯಾದಂತೆ.
ಡಾಟಾ ಬಳಕೆ
ನೀವು ಲಿಮಿಟೆಡ್ ಡಾಟಾ ಪ್ಲಾನ್ ಬಳಸುತ್ತಿದ್ದೀರೆಂದಾದರೆ ಡಾಟಾ ಬಳಕೆ ಕುರಿತು ಕಣ್ಣಿಡುವುದು ಅತ್ಯಗತ್ಯ. ಆ್ಯಂಡ್ರಾಯಿಡ್‌ಗಳಲ್ಲಿ ಡಾಟಾ ಬಳಕೆ ಅದರಲ್ಲೂ ಆ್ಯಪ್‌ಗಳು ಎಷ್ಟು ಡಾಟಾ ಬಳಕೆ ಮಾಡುತ್ತವೆ ಎನ್ನುವುದನ್ನು ಪರಿಶೀಲಿಸುವ ವ್ಯವಸ್ಥೆ ಇದೆ. ಸೆಟ್ಟಿಂಗ್ಸ್‌ಗೆ ಹೋಗಿ, ಡಾಟಾ ಯೂಸೇಜ್ ಅನ್ನು ಒತ್ತಿ. ನಿಮಗೆ ಅಲ್ಲಿ ಆ್ಯಪ್‌ಗಳು ಬಳಸುತ್ತಿರುವ ಡಾಟಾ ಕುರಿತ ಮಾಹಿತಿ ಸಿಗುತ್ತದೆ.
 
ಅಟೋಮೇಟ್ 
ಆ್ಯಂಡ್ರಾಯಿಡ್ ಫೋನ್‌ಗಳಲ್ಲಿ ಬಳಕೆ ಆಗದಿರುವ ಸೌಲಭ್ಯಗಳಲ್ಲಿ ಸ್ವಯಂಚಾಲಿತ ಟಾಸ್ಕ್‌ಗಳೂ ಸೇರಿವೆ. ಯಾವುದಾದರೂ ಹೊಸ ಪ್ರದೇಶಕ್ಕೆ ಹೋದ ಕೂಡಲೇ ಗೆಳೆಯರಿಗೆ ನಿಮ್ಮ ಮೊಬೈಲ್ ಅದರಷ್ಟಕ್ಕೆ ಎಸ್‌ಎಂಎಸ್ ಕಳುಹಿಸಬೇಕು, ಇಯರ್ ಫೋನ್ ಸಿಕ್ಕಿಸಿದ ಕೂಡಲೇ ಫೋನ್‌ನಲ್ಲಿ ಅದರಷ್ಟಕ್ಕೆ ಸಂಗೀತ ಚಾಲೂ ಆಗಬೇಕು, ಬ್ಯಾಟರಿ ಡೌನ್ ಆಗಿದ್ದಾಗ ಅಥವಾ ವೈಫೈ ಮತ್ತು ಡಾಟಾ ಬಳಕೆ ಮಿತಿ ಮೀರಿದಾಗ 3ಜಿ ಮತ್ತು ವೈಫೈ ಸಂಪರ್ಕವನ್ನು ತನ್ನಷ್ಟಕ್ಕೆ ಕಡಿತ ಮಾಡಬೇಕು- ಆ್ಯಂಡ್ರಾಯಿಡ್ ಫೋನ್ ಇದಕ್ಕೆಲ್ಲ ಅವಕಾಶ ಮಾಡಿಕೊಡುತ್ತದೆ.
 
 
ಕೃಪೆ; ಕನ್ನಡಪ್ರಭ
 
 
 

Friday, 15 April 2016

ಏಪ್ರಿಲ್‌ ಅಂತ್ಯದಲ್ಲಿ ಬರಲಿದೆ!

ಏಪ್ರಿಲ್‌ ಅಂತ್ಯದಲ್ಲಿ ಬರಲಿದೆ!
ಎಲ್ಲಾ ಸಂದರ್ಶಕರಿಗೆ https://<your-blog>.blogspot.com ಗೆ ಭೇಟಿ ನೀಡುವ ಮೂಲಕ ನಿಮ್ಮ Blogspot ಡೊಮೇನ್ ಬ್ಲಾಗ್‌ಗಳನ್ನು ಎನ್‌ಕ್ರಿಪ್ಟ್ ಮಾಡಿದ ಸಂಪರ್ಕದಲ್ಲಿ ವೀಕ್ಷಿಸಲು ಸಾಧ್ಯವಾಗುತ್ತದೆ. ನಿಮ್ಮ ಬ್ಲಾಗ್‌ಗಳ ಪ್ರಸ್ತುತ ಲಿಂಕ್‌ಗಳು ಮತ್ತು ಬುಕ್‌ಮಾರ್ಕ್‌ಗಳು ಕಾರ್ಯನಿರ್ವಹಿಸುತ್ತಲೇ ಇರುತ್ತವೆ. ಈ ಬದಲಾವಣೆಯ ಭಾಗವಾಗಿ, HTTPS ಲಭ್ಯತೆ ಸೆಟ್ಟಿಂಗ್‌ಗಳು ಇನ್ನು ಇರುವುದಿಲ್ಲ ಮತ್ತು ನಿಮ್ಮ ಬ್ಲಾಗ್‌ಗಳು ಸದಾ HTTPS ಆವೃತ್ತಿಯನ್ನು ಹೊಂದಿರುತ್ತವೆ.

Friday, 4 March 2016

ಸಿಂಪಲ್ ಕೆಲಸ

..
ನಿಮಗೆ ಸೂಪರ್ ಆಗಿ ವಸ್ತುಗಳ ರೀವೀವ್ ಬರೆಯೋಕೆ ಬರುತ್ತ?
ಸೂಪರ್ ಆಗಿ ಕಥೆ ಎಣೆಯೋಕೆ ಬರುತ್ತಾ?
ನಿಮಗೆ ಪೋಟೋಗ್ರಫಿ ಅಂದ್ರೆ ಇಷ್ಟ ನಾ?
ನಿಮಗೆ ಫೇಸ್ ಬುಕ್ ಲಿ 3000+ಫ್ರೆಂಡ್ಸ್ ಇದಾರಾ?
ಯಾವಾಗ್ಲೂ ಆನ್ಲೈನ್ ನಲ್ಲೇ ಕಾಲ ಕಳಿತಿದಿರಾ?
ನಿಮ್ಮ ಹತ್ರ ಹಳೆಯ ಹಾಡುಗಳು/ ಸಿನಿಮಾಗಳು /  ಇತರೆ ಓದುವ ಸಾಮಗ್ರಿ ಗಳು ನಿಮ್ಮ ಹತ್ರ ಇದೆಯಾ?
ಪಾರ್ಟಟೈಮ್ ಕೆಲಸಬೇಕಾ?
ಇದರಲ್ಲಿ ಯಾವುದಾದರೂ ಒಂದಕ್ಕೆ ನಿಮ್ಮ ಉತ್ತರ ಹೌದು ಎಂದಾದರೆ..
netkannada.jobs@gmail.comನಿಮ್ಮ ಡಿಟೈಲ್ಸ್ ಮೈಲ್ ಮಾಡಿ. ಸಿಂಪಲ್ ಕೆಲಸ ಕೊಡ್ತಿವಿ. ನಿಮ್ಮ ಕೆಲಸಕ್ಕೆ ಸೂಕ್ತ ಸಂಭಾವನೆ ನೂ ಕೊಡ್ತಿವಿ.. ಸುಮ್ನೆ ಒಂದು ಟ್ರೈ ಮಾಡಿ..
ಸದ್ಯಕ್ಕೆ ಈ ಮೆಸೇಜ್ ನ ನಿಮ್ ಫ್ರೆಂಡ್ಸ್ ಗೆ ಶೇರ್ ಮಾಡಿ....