Thursday, 22 June 2017

ಒಟಿಪಿ ಬಗ್ಗೆ ಒಂದು ಮಾತು

ಕಾರ್ಡುಗಳನ್ನು, ನೆಟ್‌ಬ್ಯಾಂಕಿಂಗ್ ಸೌಲಭ್ಯವನ್ನು ಬಳಸಿ ಹಣಪಾವತಿಸುವುದು ನಮ್ಮಲ್ಲಿ ಅನೇಕರಿಗೆ ಚೆನ್ನಾಗಿಯೇ ಅಭ್ಯಾಸವಾಗಿದೆ. ಹೀಗೆ ಪಾವತಿಸುವಾಗ ಹಣ ತೆಗೆಯಬೇಕಾದ್ದು ಯಾವ ಖಾತೆಯಿಂದ ಎಂದು ಬ್ಯಾಂಕಿಗೆ ಗೊತ್ತಾಗಬೇಕಲ್ಲ, ನಾವು ಖಾತೆಯ ವಿವರಗಳನ್ನು (ಲಾಗಿನ್, ಅಕೌಂಟ್ ಸಂಖ್ಯೆ ಇತ್ಯಾದಿ) ದಾಖಲಿಸುವುದು ಇದಕ್ಕಾಗಿಯೇ. ಅದನ್ನು ದಾಖಲಿಸುತ್ತಿರುವವರು ನಾವೇ ಎಂದೂ ಗೊತ್ತಾಗಬೇಡವೇ, ಅದಕ್ಕಾಗಿ ಪಾಸ್‌ವರ್ಡನ್ನೂ ಎಂಟರ್ ಮಾಡುತ್ತೇವೆ.

ಆದರೆ ನಮ್ಮ ಪಾಸ್‌ವರ್ಡ್ ನಮಗೆ ಮಾತ್ರ ಗೊತ್ತು ಎಂದು ಏನು ಗ್ಯಾರಂಟಿ? ಅದನ್ನು ಬೇರೆ ಯಾರೋ ಕದ್ದು ತಿಳಿದುಕೊಂಡುಬಿಟ್ಟಿರಬಹುದಲ್ಲ!

ಇಂತಹ ಸನ್ನಿವೇಶಗಳನ್ನು ಕೊಂಚಮಟ್ಟಿಗಾದರೂ ತಪ್ಪಿಸುವ ಉದ್ದೇಶದಿಂದ ಬಳಕೆಯಾಗುವ ತಂತ್ರಗಳಲ್ಲೊಂದು ಓಟಿಪಿ.

ಓಟಿಪಿ ಎನ್ನುವುದು 'ಒನ್ ಟೈಮ್ ಪಾಸ್‌ವರ್ಡ್' ಎಂಬ ಹೆಸರಿನ ಹ್ರಸ್ವರೂಪ. ಈ ವಿಧಾನ ಬಳಸುವಾಗ ಖಾತೆಯ ವಿವರ-ಪಾಸ್‌ವರ್ಡುಗಳ ಜೊತೆಗೆ ಬಳಕೆದಾರರ ಮೊಬೈಲಿಗೆ ಕಳುಹಿಸಿದ ಇನ್ನೊಂದು ಪಾಸ್‌ವರ್ಡನ್ನೂ ದಾಖಲಿಸುವಂತೆ ಕೇಳಲಾಗುತ್ತದೆ. ಕೆಲವೆಡೆ ಮೊಬೈಲಿಗೆ ಬರುವ ಈ ಸಂದೇಶವನ್ನು ಸಾಮಾನ್ಯ ಪಾಸ್‌ವರ್ಡ್ ಬದಲಿಗೆ ಉಪಯೋಗಿಸುವ ಸೌಲಭ್ಯವೂ ಇರುತ್ತದೆ.

ಈ ಪಾಸ್‌ವರ್ಡನ್ನು ಒಮ್ಮೆ ಮಾತ್ರವೇ - ಅದೂ ನಿಗದಿತ ಅವಧಿಯೊಳಗೆ ಮಾತ್ರ - ಉಪಯೋಗಿಸುವುದು ಸಾಧ್ಯ. ಎಸ್ಸೆಮ್ಮೆಸ್‌ನಂತಹ ಸರಳ ಮಾಧ್ಯಮವನ್ನು ಬಳಸಿ ಆನ್‌ಲೈನ್ ವ್ಯವಹಾರಗಳಿಗೆ ಹೆಚ್ಚಿನ ಸುರಕ್ಷತೆ ತಂದುಕೊಡುತ್ತಿರುವುದು ಓಟಿಪಿಯ ಹೆಚ್ಚುಗಾರಿಕೆ. ಕಾರ್ಡು, ಪಾಸ್‌ವರ್ಡುಗಳ ಜೊತೆಗೆ ಮೊಬೈಲ್ ಫೋನ್ ಕೂಡ ಕಳ್ಳರ ಪಾಲಾದ ಸಂದರ್ಭಗಳನ್ನು ಹೊರತುಪಡಿಸಿದಂತೆ ಇದರ ವಿಶ್ವಾಸಾರ್ಹತೆ ಸಾಕಷ್ಟು ಉತ್ತಮವಾಗಿಯೇ ಇರುತ್ತದೆ. ಓಟಿಪಿಯ ಉದ್ದೇಶ ನಮ್ಮ ಸುರಕ್ಷತೆಯೇ ಆದ್ದರಿಂದ ನಾವು ಅದನ್ನು ಇತರರಿಗೆ ತಿಳಿಸುವುದು ಖಂಡಿತಾ ಒಳ್ಳೆಯದಲ್ಲ.

Wednesday, 21 June 2017

ಯಾರಪ್ಪನ ಆಸ್ತಿ ಈ ಅಂತರ್ಜಾಲ!?

ದಿನಾ ಬೆಳಗ್ಗೆ ಎದ್ದು ಮಲಗೋ ಮುಂಚಿನ ನಿಮಿಷದವರೆಗೂ ಇಂಟರ್ನೆಟ್ಟು ಅನ್ನೋ ಜೇಡರಬಲೆಯಲ್ಲಿ ಸಿಕ್ಕಾಂಡಿರ್ತೀರಲ್ಲ, ಯಾವತ್ತಾದ್ರೂ ಇಂಟರ್ನೆಟ್ಟು ನಿಂತುಹೋದ್ರೆ ಏನ್ ಕಥೆ ಅಂತಾ ಯೋಚ್ನೆ ಮಾಡಿದ್ದೀರಾ? “ಏನು!! ಇಂಟರ್ನೆಟ್ಟು ನಿಂತುಹೋಗುತ್ತಾ!? ಅದು ಯಾರಪ್ಪನ ಮನೆಯದ್ದು ಹಾಗೆಲ್ಲಾ ನಿಲ್ಸೋಕೆ? ಅದು ಹೇಗೆ ನಿಂತೋಗತ್ತೆ?” ಅಂತಾ ಅವಾಜ್ ಹಾಕ್ತಿದ್ದೀರಾ!? ಸಮಾಧಾನ ಮಾಡ್ಕಳ್ಳಿ. ನಾನು ನೀವು ಅಂದ್ಕೊಂಡಷ್ಟು ಸರ್ವತಂತ್ರ ಸ್ವತಂತ್ರವಾಗೇನಿಲ್ಲ ಇಂಟರ್ನೆಟ್ಟು. ನಿಲ್ಸೋಕೆ ಯಾರಪ್ಪನ ಮನೆಯದ್ದಲ್ಲದಿದ್ದರೂ, ಇದನ್ನ ನಡೆಸೋಕೆ ಕೆಲವು ದೊಣ್ಣೆನಾಯಕರುಗಳಿದ್ದಾರೆ. ಅಷ್ಟೇ ಅಲ್ಲ, ಅಂತರ್ಜಾಲಕ್ಕೊಂದು ಕೀಲಿಕೈ ಕೂಡ ಇದೆ. ಕೀಲಿಕೈಯೆಂದರೆ ಸುಮ್ಮನೆ ಸಾಹಿತ್ಯಿಕವಾಗಿ (literal) ಹೇಳ್ತಾ ಇಲ್ಲ. ನಿಜವಾಗಿಯೂ ಅಂತರ್ಜಾಲಕ್ಕೊಂದು ಕೀಲಿಕೈ (Key) ಇದೆ. ಈ ಕೀಲಿಕೈ ಸಿಗಬೇಕಾದರೆ ಜಗತ್ತಿನಾದ್ಯಂತ ಹರಡಿರುವ 14ಜನ ಸೇರಬೇಕು. ಈ 14ಜನರ ಹತ್ತಿರವಿರುವ ಏಳು ಕೀಲಿಕೈಗಳು ಸೇರಿದರೆ ಮಾತ್ರ ಆ ‘ಮಾಸ್ಟರ್ ಕೀ’ ಸಿಗುವುದು. ಆ ಮಾಸ್ಟರ್ ಕೀ ಸಿಕ್ಕಿದರೆ ಅಂತರ್ಜಾಲಕ್ಕೆ ನೀವೇ ಒಡೆಯ! ಹೇಗೆ ಅಂತೀರಾ? ಮುಂದೆ ಓದಿ.

ಅಂತರ್ಜಾಲ ಅನ್ನುವುದೊಂದು ಒಂಟಿಮನೆಯೇನಲ್ಲ. ಹಾಗಂತ ಇದನ್ನ ಒಂದಷ್ಟು ಮನೆಗಳ ಜಾಲ ಅಂತಾ ತಿಳ್ಕೊಂಡಿದ್ರೆ ಅದು ತಪ್ಪು ತಿಳುವಳಿಕೆ. ಇಂಗ್ಳೀಷಿನ Internet ಹೆಸರು ಇದಕ್ಕೆ ಹೆಚ್ಚು ಸೂಕ್ತ ಅರ್ಥ ಕೊಡುತ್ತದೆ. ಯಾಕೆಂದರೆ, ಇದೊಂದು ಜಾಲಗಳನ್ನು ಸಂಪರ್ಕಿಸುವ ಮಹಾಜಾಲ. It’s a network of networks. ಬೇರೆ ಬೇರೆ ದೇಶದ, ಬೇರೆ ಬೇರೆ ಸಂಸ್ಥೆಗಳ, ಬೇರೆ ಬೇರೆ ಸಂಘಟನೆಗಳ ತಾಣಗಳನ್ನು ಸಂಪರ್ಕಿಸುವ ಒಂದು ಮಹಾಜಾಲ. ಹೀಗಿದ್ದಾಗ ಇದನ್ನು ಯಾರೋ ಒಬ್ಬ ವ್ಯಕ್ತಿ ಅಥವಾ ಒಂದು ಸಂಸ್ಥೆ ನಿರ್ಬಂಧಿಸಲು ಸಾಧ್ಯವಿಲ್ಲ. ಆದರೆ ಕೆಲವೊಂದು ದೇಶಗಳಲ್ಲಿ ಅಂತರಜಾಲದ ಪ್ರವೇಶವನ್ನು ಒಂದೊಂದೇ ಸಂಸ್ಥೆ ಅಥವಾ ವ್ಯಕ್ತಿ ಅಥವಾ ಒಂದು ಗುಂಪು ನಿರ್ಬಂಧಿಸಬಹುದು. ಉದಾಹರಣೆಗೆ ನಾನಿರುವ ಸಂಯುಕ್ತ ಅರಬ್ ಎಮಿರೆಟ್ಸಿನಲ್ಲಿ 2006ಕ್ಕೆ ಮುಂಚೆ ದೇಶದ ಇಂಟರ್ನೆಟ್ ಟ್ರಾಫಿಕ್ಕನ್ನು ‘ಎತಿಸಲಾತ್’ ಎಂಬ ಕಂಪನಿಯೇ ನಿರ್ಧರಿಸುತ್ತಿತ್ತು. ಈಗ ‘ಎತಿಸಲಾತ್’ ಮತ್ತು ‘ಡು’ ಎಂಬ ಎರಡು ಕಂಪನಿಗಳಿವೆ. ನಾಳೆ ಏನಾದರೂ ಇವೆರಡೂ ಕಂಪನಿಗಳ ಸಿ.ಇ.ಒಗಳು ಸೇರಿ ಯು.ಎ.ಇ ಗೆ ಇಂಟರ್ನೆಟ್ ಬೇಡ ಎಂದಾಗಲೀ ಅಥವಾ ಅಂತರ್ಜಾಲದ ಇಂತಿಂತಾ ಪುಟಗಳು ಮಾತ್ರ ಇಲ್ಲಿನ ನಾಗರೀಕರಿಗೆ ಸಿಗುವಂತಾಗಲಿ ಎಂದು ನಿರ್ಧರಿಸಿದರೆ ನನಗೆ ಅವರು ಕೊಟ್ಟಷ್ಟು ಪ್ರಸಾದವೇ ಗತಿ. ಹಾಗೂ ಇದು ನಡೆಯುತ್ತಿದೆ ಕೂಡಾ. ಇಲ್ಲಿನ ಸರ್ಕಾರ ಅಥವಾ ಇಸ್ಲಾಂಗೆ ವಿರುದ್ಧವಾಗಿ ಮಾತನಾಡುವ ಜಾಲಪುಟಗಳನ್ನು ಹಾಗೂ ಅಶ್ಲೀಲತೆ/ನಗ್ನತೆಯನ್ನು ತೋರಿಸುವ ಪುಟಗಳನ್ನು ಈ ಕಂಪನಿಗಳು ನಿರ್ಬಂಧಿಸುತ್ತವೆ. ಇದೇ ರೀತಿ ಚೀನಾ, ಉ.ಕೊರಿಯಾ, ಇರಾನ್ ಮುಂತಾದ ದೇಶಗಳಲ್ಲಿಯೂ ಇದೇ ರೀತಿ ನಡೆಯುತ್ತದೆ. ಪ್ರತಿಯೊಂದು ಸರ್ಕಾರ ಹಾಗೂ ಆಯಾ ದೇಶದ ಟೆಲಿಕಾಂ ಕಂಪನಿಗಳು ಜಾಲವನ್ನು ಸ್ವಲ್ಪಮಟ್ಟಿಗೆ ನಿರ್ಬಂಧಿಸುತ್ತವೆ.

ಆದರೆ, ಜಗತ್ತಿನ ಕೆಲ ಕಂಪನಿಗಳಿಗೆ ಇಡೀ ಇಂಟರ್ನೆಟ್ಟನ್ನೇ ನಿರ್ಬಂಧಿಸುವ ಶಕ್ತಿಯಿದೆಯೆಂದರೆ ನಂಬುತ್ತೀರಾ? ಇಲ್ಲಿ ಕೇಳಿ. ನಮ್ಮ ನಮ್ಮ ದೇಶದ ಟೆಲಿಕಾಂ ಕಂಪನಿಗಳಿಗೆ ನಾವು ISP (Internet Service Providers) ಎಂದು ಕರೆಯುತ್ತೇವೆ. ಈ ISPಗಳು ನೇರವಾಗಿ ತಾವೇ ಅಂತರ್ಜಾಲವನ್ನು ನಿಮಗೆ ಒದಗಿಸುವುದಿಲ್ಲ. ಇವುಗಳಿಗೂ ಸೇವೆ ಒದಗಿಸುವ ಕೆಲ ಸಂಸ್ಥೆಗಳಿವೆ. ಇವನ್ನು upstream ISPಗಳೆನ್ನುತ್ತಾರೆ. ಅಂತರ್ಜಾಲ ಪ್ರಾರಂಭವಾದಾಗಲಿಂದಲೂ ಈ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿರುವುದರಿಂದ, ಅಂತರ್ಜಾಲದ ಪರಿಕಲ್ಪನೆಯನ್ನು ನಿಜವಾಗಿಸಿದ್ದೇ ಈ ಕಂಪನಿಗಳಾದ್ದರಿಂದ, ಹಾಗೂ ಇವತ್ತಿನ ಅಂತರ್ಜಾಲದ ಎಲ್ಲಾ ತಂತ್ರಜ್ಞಾನಗಳೂ ಈ ಕಂಪನಿಗಳಿಂದಲೇ ಉಗಮವಾದ್ದರಿಂದ ಇಡೀ ಅಂತರ್ಜಾಲದ ಬೆನ್ನೆಲುಬಾಗಿ ಈ ಕಂಪನಿಗಳು ಕಾರ್ಯನಿರ್ವಹಿಸುತ್ತವೆ. ಇವುಗಳಲ್ಲಿ ಅತ್ಯಂತ ಮುಖ್ಯವಾದವುಗಳು:

(*) UUNET
(*) Verizon
(*) Level3
(*) AT&T
(*) Qwest
(*) Sprint
(*) IBM

ಅಂತರ್ಜಾಲದ ಪ್ರತಿಯೊಂದು ಬೈಟ್ ಮಾಹಿತಿ ಹರಿಯುವುದೇ ಇವುಗಳ ಮೂಲಕ. ಇವು ಯಾವಾಗ ಬೇಕಾದರೂ ನಿಮ್ಮ ಅಂತರ್ಜಾಲದ ಬಾಗಿಲನ್ನು ಮುಚ್ಚಬಲ್ಲವು. ಆದರೆ, ಹಾಗಾಗುವ ಸಾಧ್ಯತೆ ಕಡಿಮೆ. ಯಾಕೆಂದರೆ, ಇವೆಲ್ಲವೂ ಬಂಡವಾಳಶಾಹಿ ಕಂಪನಿಗಳಾದ್ದರಿಂದ, ಇವುಗಳ ಆದಾಯವೂ ಅಂತರ್ಜಾಲದಿಂದಲೇ ಬರುತ್ತಿರುತ್ತದೆ. ಇವುಗಳಲ್ಲಿ ಯಾವ ಕಂಪನಿಯೂ ಅಂತರ್ಜಾಲವನ್ನು ನಿಲ್ಲಿಸಹೋಗಿ ತನ್ನ ಕಾಲಿಗೆ ತಾನೇ ಗುಂಡು ಹೊಡೆದುಕೊಳ್ಳುವ ಕೆಲಸ ಮಾಡಲಾರದು. ಹಾಗೂ ಈ ಕಂಪನಿಗಳು ವ್ಯಾವಹಾರಿಕ ಕಾಯ್ದೆಯಡಿಯಲ್ಲಿ ಬರುವುದರಿಂದ ಸರ್ಕಾರಗಳು ಮತ್ತು ಗ್ರಾಹಕರು ಇವನ್ನು ನಿಯಂತ್ರಿಸಬಹುದು.

ಆದರೆ, ಅಂತರ್ಜಾಲವನ್ನು ನಿಯಂತ್ರಿಸುವಲ್ಲಿ ಇವುಗಳಷ್ಟೇ ಮುಖ್ಯವಾದ ಇನ್ನೂ ಕೆಲವು ಅಂಗಗಳಿವೆ. ಅಂತರ್ಜಾಲದ ಆವಿಷ್ಕಾರವಾದಾಗ (ಅದಿನ್ನೂ ARPANET ಎಂದು ಕರೆಯಲ್ಪಡುತ್ತಿದ್ದಾಗ) ಅದನ್ನು ಒಂದೇ ಸಂಸ್ಥೆ ನಿರ್ವಹಿಸುತ್ತಿತ್ತು. ಆದರೆ, ನಿಧಾನವಾಗಿ ಬೇರೆ ಬೇರೆ ಅಂಗಗಳು ARPANETನೊಂದಿಗೆ ಸೇರಲಾರಂಭಿಸಿದಾಗ, ಇದರ ಕ್ಲಿಷ್ಟತೆ ಹೆಚ್ಚುತ್ತಾ ಹೋಯಿತು. ಹಾಗೂ ಕೆಲವೊಮ್ಮೆ ಈ ಅಂಗಸಂಸ್ಥೆಗಳು ಬೇರೆ ದೇಶಗಳಿಗೆ ಸೇರಿದವುಗಳಾಗಿದ್ದವು. ಅಂತರ್ಜಾಲ ಬೆಳೆಯುತ್ತಿರುವ ವೇಗ ನೋಡಿದ ಕೆಲ ತಜ್ಞರು ಇದನ್ನು ತಹಬಂದಿಯಲ್ಲಿಡಲು ಒಂದಷ್ಟು ನಿಯಮಾವಳಿಗಳನ್ನು ರೂಪಿಸಬೇಕೆಂಬ ಅಭಿಪ್ರಾಯಕ್ಕೆ ಬಂದರು. ಅಷ್ಟೇ ಅಲ್ಲದೆ, ಅಂತರ್ಜಾಲ ಬೆಳೆಯಲಾರಂಭಿಸಿದಂತೆ ಒಂದೇ ಹೆಸರಿನ ಹಲವು ಅಂತರ್ಜಾಲ ಪುಟಗಳು ಬರಲಾರಂಭಿಸಿದವು. ನೆನಪಿರಲಿ, ಕಂಪ್ಯೂಟರುಗಳಿಗೆ ನಾನು ನೀವು ಮಾತನಾಡುವ ಭಾಷೆ ಅರ್ಥವಾಗುವುದಿಲ್ಲ. ಅವಕ್ಕೇನಿದ್ದರೂ ಅಂಕಿಸಂಖ್ಯೆಗಳಷ್ಟೇ ಅರ್ಥವಾಗುವುದು. ನೀವು http://www.businessinsider.com ಎಂದು ಬರೆದದ್ದು ಅವಕ್ಕೆ 64.27.101.155 ಎಂದೇ ಅರ್ಥವಾಗುವುದು. ಹೀಗಿದ್ದಾಗ ಪ್ರತಿಯೊಂದು ಅಂತರ್ಜಾಲ ಪುಟಕ್ಕೆ ಅದರದ್ದೇ ಆದ ಸಂಖ್ಯಾವಿಳಾಸ (numeric address) ಇರಬೇಕಲ್ಲವೇ? ಇದನ್ನು ನಿರ್ಧರಿಸುವುದ್ಯಾರು? ಅದಕ್ಕಾಗಿಯೇ, ಜಗತ್ತಿನಲ್ಲಿ ಕೆಲ ಸಂಸ್ಥೆಗಳಿವೆ. ಇವು ಅಂತರ್ಜಾಲದ ನಿಯಾಮಾವಳಿಗಳನ್ನು (protocols) ರೂಪಿಸುತ್ತವೆ, ಅಂತರ್ಜಾಲದಲ್ಲಿ ಮಾಹಿತಿಗಳು ಹೇಗೆ ಹರಿದಾಡಬೇಕೆಂದು ನಿರ್ಧರಿಸುತ್ತವೆ, ಹಾಗೂ ಪ್ರತಿಯೊಂದು ಅಂತರ್ಜಾಲ ಪುಟಕ್ಕೂ ಸಂಖ್ಯಾನಾಮಕರಣ ಮಾಡುತ್ತವೆ. Internet Engineering Task Force, ICANN, National Science Foundation, InterNIC, Internet Architecture Board ಈ ಸಂಸ್ಥೆಗಳು. ಇವೆಲ್ಲವೂ ಯಾವುದೇ ಲಾಭಕ್ಕಾಗಿ ನಡೆಯುವ ಸಂಸ್ಥೆಗಳಲ್ಲ. ಉತ್ತಮವಾದ ಅಂತರ್ಜಾಲ ಅನುಭವ ನೀಡುವ ನಿಟ್ಟಿನಲ್ಲಿ ಕೆಲಸಮಾಡುವ nonprofit organisationಗಳು. ಯಾರೋ ಪ್ರೋಗ್ರಾಮರ್ ಮೌಟನ್-ವ್ಯೂನಲ್ಲಿ ಕುಳಿತು ತನ್ನ ವಿಂಡೋಸ್ ಕಂಪ್ಯೂಟರಿನಲ್ಲಿ http ನಿಯಮದಡಿ ಬರೆದ ಅರಬ್ಬೀ ಭಾಷೆಯ ಅಂತರ್ಜಾಲ ಪುಟವೊಂದು, ಐಬಿಎಂನ ಡೇಟಾ ಸೆಂಟರುಗಳ ಮೂಲಕ ಹಾದು, AT&Tಯ ಕೇಬಲ್ಲುಗಳಲ್ಲಿ ಹರಿದು, ಕಝಕಿಸ್ಥಾನದ kaznetನ ಕೇಬಲ್ಲು ತಲುಪಿ, ಅಲ್ಲಿನ ಗ್ರಾಹಕನೊಬ್ಬನ ಆಡ್ರಾಯ್ಡ್ ಫೋನಿನಲ್ಲಿ ಒಪೇರಾ ಬೌಸರಿನಲ್ಲಿ ನೋಡಿದರೂ ಮೂಲರೂಪದಲ್ಲೇ ದೊರಕುವ ‘ಅಂತರ್ಜಾಲ ಪಯಣ’ದಲ್ಲಿ ಒಂದೇ ಒಂದು ಬೈಟ್ ದತ್ತಾಂಶ ಕಳೆದುಹೋಗದಂತೆ ಮಾಡುವಲ್ಲಿ ಈ ಸಂಸ್ಥೆಗಳ ಪಾತ್ರ ಬಹು ದೊಡ್ಡದು.

1998ರಲ್ಲಿ ಪ್ರಾರಂಭವಾದ ICANN (Internet Corporation for Assigned Names and Numbers)ದ ಮುಖ್ಯ ಕೆಲಸ ಅಂತರ್ಜಾಲ ಪುಟಗಳಿಗೆ ತನ್ನದೇ ಆದ ವಿಶಿಷ್ಟ ಸಂಖ್ಯಾವಿಳಾಸ ನಿಯೋಜಿಸುವುದು. ಅಂದರೆ http://www.hotmail.com ಹಾಗೂ http://www.hotmale.com ಎರಡಕ್ಕೂ ವ್ಯತ್ಯಾಸ ಇರುವಂತೆ ನೋಡಿಕೊಳ್ಳುವುದು  ಅಂದರೆ, ಯಾವುದೋ ಒಂದು ಫೋನು ಡಯಲ್ ಮಾಡಿದಾಗ ‘ಆ’ ನಂಬರಿಗೇ ಕರೆಹೋಗುವಂತೆ ಹೇಗೆ ಟೆಲಿಫೊನು ಎಕ್ಸ್ಚೇಂಜುಗಳು ನೋಡಿಕೊಳ್ಳುತ್ತವೋ, ಹಾಗೆಯೇ ICANN ಒಂದು ಇಂಟರ್ನೆಟ್ ಡೈರೆಕ್ಟರಿ ಇದ್ದಹಾಗೆ. ಎಲ್ಲ ಅಂತರ್ಜಾಲ ಪುಟಗಳ ನಂಬರುಗಳನ್ನು ಇಟ್ಕೊಂಡಿರುತ್ತೆ, ಹಾಗೂ ಒಂದೇ ಪೋನ್ ನಂಬರ್ ಇಬ್ಬರಿಗೆ ಸಿಗದಿರುವ ಹಾಗೆ ನೋಡಿಕೊಳ್ಳುತ್ತೆ. ಇದೇ ಅಲ್ಲದೆ ಈ ಸಂಸ್ಥೆ ಅಂತರ್ಜಾಲವನ್ನು ಸ್ಥಿರವಾಗಿ ನಿಲ್ಲುವಂತೆ ಮಾಡುವಲ್ಲಿ, ನಮ್ಮ ನಿಮ್ಮ ಮಧ್ಯದ ಕನೆಕ್ಷನ್ ಮುರಿದುಹೋಗದಿರುವಂತೆ ನೋಡಿಕೊಳ್ಳುವಲ್ಲಿ ಕೂಡಾ ಮಹತ್ವದ ಪಾತ್ರವಹಿಸುತ್ತದೆ.

ಈಗ ವಿಷಯಕ್ಕೆ ಬರೋಣ. ಯಾರಾದರೂ ಕಂಪ್ಯೂಟರ್ ಕಿಲಾಡಿ ICANN ಸಂಸ್ಥೆಯ ಡೇಟಾಬೇಸಿಗೆ ಲಗ್ಗೆ ಹಾಕಿ ಇಡೀ ಅಂತರ್ಜಾಲವನ್ನು ನಿಯಂತ್ರಿಸಬಹುದು ಮತ್ತು ಅಂತರ್ಜಾಲ ಕುಸಿದುಬೀಳಲೂ ಕಾರಣನಾಗಬಹುದು. ಹೇಗೆ ಅಂತೀರಾ? ಇದರ ಡೇಟಾಬೇಸಿಗೆ ಹೋಗಿ ನಿಜವಾದ ಬ್ಯಾಂಕ್ ವೆಬ್ಸೈಟಿನ ಬದಲು ನಕಲಿ ವೈಬ್ಸೈಟಿಗೆ ಗ್ರಾಹಕರನ್ನು ಕಳಿಸಿ, ದುಡ್ಡು ಲಪಟಾಯಿಸಬಹುದು. ಗೂಗಲ್ ಅಂತಾ ಟೈಪಿಸಿದವರನ್ನು ಇನ್ಯಾವುದೋ ಅಶ್ಲೀಲ ವೆಬ್ಸೈಟಿಗೆ ಕಳುಹಿಸಿ ಮುಜುಗರವನ್ನುಂಟು ಮಾಡಬಹುದು ಇತ್ಯಾದಿ ಇತ್ಯಾದಿ. ಅಂದರೆ, ಈ ಕಂಪನಿಯ ಡೇಟಾಬೇಸೇ ಅಂತರ್ಜಾಲಕ್ಕೆ ಹೆಬ್ಬಾಗಿಲಿದ್ದಂತೆ!!

ಹೀಗೇನಾದರೂ ಆಗಿ (ಅಥವಾ ಜಗತ್ತಿನಲ್ಲೇದರೂ ಅನಿರೀಕ್ಷಿತ ವಿಪತ್ತು ಘಟಿಸಿ) ಅಂತರ್ಜಾಲವೇ ಕುಸಿದುಬಿದ್ದರೆ, ಮತ್ತೆ ಅದನ್ನು ಕಟ್ಟಲು ಬಹಳಷ್ಟು ಸಮಯ ಬೇಕಾಗುತ್ತದೆ. ಹೀಗಿದ್ದಾಗ, ICANN ತನ್ನಲ್ಲಿರುವ ಮಾಹಿತಿಯನ್ನು ಅತ್ಯಂತ ಗೌಪ್ಯವಾಗಿ ಕಾಯ್ದಿಡಬೇಕು (ಅಂದರೆ ಹೆಚ್ಚು ಜನರಿಗೆ ತಿಳಿಯದಂತೆ) ಆದರೆ ಹಾಗಂತ ಒಬ್ಬರಿಗೇ ಇದರ ಕೀಲಿಕೈ ಕೊಟ್ಟರೆ ಅದೂ ಕಷ್ಟ. ಒಳ್ಳೇ ಪೀಕಲಾಟಕ್ಕೆ ಬಂತಲ್ಲಾಪ್ಪಾ! ಇದಕ್ಕಾಗಿಯೇ ICANN ತನ್ನ ಡೇಟಾಬೇಸ್ ಅನ್ನು ಅತ್ಯಂತ ಸುರಕ್ಷತೆಯಿಂದ ಕಾಯಲು ಹಾಗೂ ಅದರ ನಿಯಂತ್ರಣ ಒಬ್ಬನೇ ವ್ಯಕ್ತಿಯಲ್ಲಿ ಇರದಿರುವಂತೆ ನೋಡಿಕೊಳ್ಳಲು ಅನುಕೂಲವಾಗುವಂತೆ ಒಂದು ಕೆಲಸ ಮಾಡಿದೆ. ಅದೇನೆಂದರೆ ಜಗತ್ತಿನಾದ್ಯಂತ ಬೇರೆ ಬೇರೆ ದೇಶದಲ್ಲಿ ಹರಡಿ ಹೋಗಿರುವ ಏಳುಜನರನ್ನು ಆರಿಸಿ ಅವರಿಗೊಂದೊಂದು ‘ಅಂತರ್ಜಾಲದ ಕೀಲಿಕೈ’ಯನ್ನು ಕೊಟ್ಟಿದೆ. ಕೀಲಿಕೈಯೆಂದರೆ ಪಾಸ್ವರ್ಡ್ ಅಲ್ಲ. ನಿಜವಾದ ಕೀಲಿಕೈ!! ಈ ಏಳು ಜನರಿಗೆ ಒಬ್ಬೊಬ್ಬರು ಬ್ಯಾಕ್-ಅಪ್ ಇದ್ದಾರೆ. ಅಂದರೆ ಈ ಒಟ್ಟು ಹದಿನಾಲ್ಕು ಜನರ ಹತ್ತಿರ ಅಂತರ್ಜಾಲದ ಕೀಲಿಕೈ ಇರುತ್ತದೆ. ವರ್ಷದಲ್ಲಿ ನಾಲ್ಕು ಬಾರಿ ಈ ಹದಿನಾಲ್ಕು ಮಂದಿ ಅಮೇರಿಕಾದ ಪೂರ್ವತೀರ ಮತ್ತು ಪಶ್ಚಿಮ ತೀರದಲ್ಲಿ ಸೇರಿ, ಈ ಕೀಲಿಕೈಯನ್ನು ಬದಲಾಯಿಸುತ್ತಾರೆ. ಅಂತರ್ಜಾಲವನ್ನು ಸುರಕ್ಷಿತವಾಗಿಡಲು ಈ ನಿಯಮವನ್ನು 2010ರಿಂದ ICANN ಪಾಲಿಸಿಕೊಂಡು ಬಂದಿದೆ.

ಈ ಏಳು ಜನ ಯಾರ್ಯಾರೋ ದಾರಿಹೋಕರಲ್ಲ. ಬದಲಿಗೆ ಅಂತರರ್ಜಾಲ ಸುರಕ್ಷತೆಗಾಗಿ ಶ್ರಮಿಸಿ, ಅದರಲ್ಲಿ ಅಪಾರ ಜ್ಞಾನವುಳ್ಳವರೂ ಹಾಗೂ ಬೇರೆ ಬೇರೆ ಅಂತರ್ಜಾಲ ಸಂಬಂಧಿತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದವರಾಗಿರುತ್ತಾರೆ. ಇವರ ಆಯ್ಕೆ ಪ್ರಕ್ರಿಯೆ ಹಾಗೂ ಕೀಲಿಕೈ ಮಾರ್ಪಾಡುವಿಕೆಯ ಕೆಲಸ ಅತ್ಯಂತ್ಯ ಗೌಪ್ಯವಾಗಿ ನಡೆಯುತ್ತದೆ. ವರ್ಷಕ್ಕೆ ನಾಲ್ಕುಬಾರಿ ನಡೆಯುವ ಕೀ ಬದಲಾವಣೆಯ ಗೌಪ್ಯ ಕಾರ್ಯಕ್ರಮಕ್ಕೆ ‘key ceremony’ ಎಂದೇ ಹೆಸರು. ಈವರೆಗೆ ಎರಡು ಬಾರಿ ಈ ಕಾರ್ಯಕ್ರಮದ ವೀಕ್ಷಣೆಗೆ ಕೆಲ ಪತ್ರಕರ್ತರನ್ನೂ ಆಹ್ವಾನಿಸಲಾಗಿದೆ ಹಾಗೂ ಇದರ ಬಗ್ಗೆ ಬರೆದಿದ್ದಾರೋ ಅದಷ್ಟೇ ನಮಗೆ ತಿಳಿದಿರುವ ವಿಷಯ.

Key ceremoneyಯ ದಿನ ಒಂದೆಡೆ ಸೇರುವ ಈ ಏಳೂ ಜನರನ್ನು ಒಂದು ಅತೀವ ಸುರಕ್ಷತೆಯ ಕೋಣೆಯಲ್ಲಿ ಸೇರಿಸಲಾಗುತ್ತದೆ. ಆ ಕೋಣೆಗೆ ಹೋಗುವ ಮುನ್ನ ಬಹಳಷ್ಟು ಸುರಕ್ಷತಾ ಬಾಗಿಲುಗಳನ್ನು ದಾಟಿಯೇ ಹೊಗಬೇಕು. ಕೀಗಳು, ಫಿಂಗರ್ ಪ್ರಿಂಟ್, ಆಕ್ಸೆಸ್ ಕಾರ್ಡ್, ಐರಿಸ್ ಸ್ಕ್ಯಾನ್ ಮುಂತಾದ ಹಂತಗಳನ್ನು ದಾಟಿ ಆ ceremony ನಡೆಯುವ ಕೋಣೆಗೆ ತಲುಪುವ ಈ ‘ಅಂತರ್ಜಾಲ ವಾರಸುದಾರರು’ ತಂತಮ್ಮ ಕೀಗಳಿಂದ ಒಂದೊಂದ್ ಲಾಕರ್ ಡಬ್ಬವನ್ನು ತೆರೆಯುತ್ತಾರೆ. ಅದರೊಳಗೆ ಇಟ್ಟಿರುವ ತಂತಮ್ಮ ಸ್ಮಾರ್ಟ್-ಕಾರ್ಡುಗಳನ್ನು ತೆಗೆದುಕೊಳ್ಳುತ್ತಾರೆ. ಅವುಗಳನ್ನು ಉಪಯೋಗಿಸಲೂ ಒಂದೊಂದು ಪಾಸ್ವರ್ಡುಗಳನ್ನು ಆ ಕಾರ್ಡುಗಳ ಬಳಕೆದಾರರೇ ನಿರ್ಧರಿಸುತ್ತಾರೆ. ಈ ಏಳೂ ಸ್ಮಾರ್ಟ್ ಕಾರ್ಡುಗಳನ್ನು ಒಟ್ಟಿಗೆ ಉಪಯೋಗಿಸಿದಾಗ ಅಂತರ್ಜಾಲದ ಮಹಾದ್ವಾರವನ್ನು ತೆಗೆಯುವ ‘ಮಾಸ್ಟರ್ ಕೀ’ ದೊರೆಯುತ್ತದೆ. ಅದನ್ನು ಜನರೇಟ್ ಮಾಡಲೂ ಸುಮಾರು ನೂರಾಏಳು ಹಂತಗಳ ಕ್ರಮಸೂಚಿಯಿದೆ. ಇದೆಲ್ಲಾ ನಡೆಯುವುದು ಸುಮಾರು ಒಂಬತ್ತು ಜನ ನಿಲ್ಲಬಹುದಾದ ಸಣ್ಣ ಪಂಜರದಲ್ಲಿ ಹಾಗೂ ಒಂದಿಪ್ಪತು ಜನ ಕೂರಬಹುದಾದ ಸಣ್ಣ ಕೋಣೆಯಲ್ಲಿ. ಈ ಮಾಸ್ಟರ್ ಕೀ ಒಂದು ಪಾಸ್ವರ್ಡ್ ತರಹದ್ದೇನೋ ಆಗಿರುತ್ತದೆ. ಈ ಪಾಸ್ವರ್ಡ್ ಬಳಸಿದರೆ ಮಾತ್ರ ಮುಖ್ಯ ಡೇಟಾಬೇಸ್ ಅನ್ನು ಉಪಯೋಗಿಸಲು ಸಾಧ್ಯ.

ಓಹೋ ಸರಿ ಸರಿ. ಒಂದುವೇಳೆ ಈ ಮಾಸ್ಟರ್ ಕೀ ಜನರೇಟ್ ಮಾಡುವ ಯಂತ್ರವೇ ಏನಾದರೂ ಕೆಲಸಮಾಡುವುದನ್ನು ನಿಲ್ಲಿಸಿದರೆ ಏನು ಮಾಡುತ್ತಾರೆ ಅಂತಾ ಕೇಳ್ತೀರಾ? ICANN ಅದಕ್ಕೂ ಒಂದು ವ್ಯವಸ್ಥೆ ಮಾಡಿದೆ. ಅದೇನೆಂದರೆ, ಜಗತ್ತಿನಾದ್ಯಂತ ಹರಡಿಹೋಗಿರುವ ಇನ್ನೂ ಏಳು ಜನ ಈ ಇಡೀ ವ್ಯವಸ್ಥೆಗೆ ಸೂಪರ್ ಬ್ಯಾಕ್-ಅಪ್ ಆಗಿ ನಿಲ್ಲುವಂತಹ ವ್ಯವಸ್ಥೆ. ಒಂದು ವೇಳೆ ಈ ಮಾಸ್ಟರ್ ಕೀ ಜನರೇಟ್ ಮಾಡುವ ಯಂತ್ರ ಕೆಲಸಮಾಡುವುದನ್ನು ನಿಲ್ಲಿಸಿದರೆ, ಅಥವಾ ಏನಾದರೂ ಅವಘಡ ಸಂಭವಿಸಿದರೆ, ಅದನ್ನು ಪುನಃ ರಚಿಸಲು ಬೇಕಾಗುವ ಕಂಪೂಟರ್ ಪ್ರೋಗ್ರಾಮ್ ಅನ್ನು ಏಳು ಭಾಗಗಳಾಗಿ ವಿಂಗಡಿಸಿ ಈ ಏಳು ಜನರ ಮಧ್ಯೆ ಹಂಚಲಾಗಿದೆ. ಒಂದುವೇಳೆಯೇನಾದರೂ ICANNನ ಆಫೀಸೇನಾದರೂ ನಿರ್ನಾಮವಾದರೆ ಇನ್ನೊಂದು ಕಡೆ ಈ ಯಂತ್ರವನ್ನು ಪುನರ್ನಿಮಿಸಲು ಈ ಏಳು ಜನ ಒಂದಾಗುತ್ತಾರೆ. ವರ್ಷಕ್ಕೊಮ್ಮೆ ಈ ಏಳು ಜನ ತಾವು ಸುರಕ್ಷಿತವಾಗಿದ್ದೇವೆ ಹಾಗೂ ‘ಎಲ್ಲವೂ ಸರಿಯಿದೆ’ ಎಂದು ನಿರೂಪಿಸಲು, ತಮ್ಮ ಒಂದು ಭಾವಚಿತ್ರ, ಅಂದಿನ ದಿನಪತ್ರಿಕೆ ಮತ್ತು ತಮ್ಮ ಕೀ (ಕೋಡ್) ಅನ್ನು ICANN ಆಫೀಸಿಗೆ ಕಳಿಸುತ್ತಾರೆ. ಹೇಗಿದೆ ವ್ಯವಸ್ಥೆ!?

ಇದರ ಬಗ್ಗೆ ಹೆಚ್ಚಿನ ಆಸಕ್ತಿಯಿದ್ದರೆ, http://bit.ly/1pDUq3g ಇಲ್ಲಿ ಕ್ಲಿಕ್ಕಿಸಿ. ಅಲ್ಲೊಂದು ಸಣ್ಣ ವಿಡಿಯೋ ಕೂಡಾ ಇದೆ. ಇತ್ತೀಚೆಗೆ ನಡೆದ key ceremoneyಯೊಂದರ ದೃಶ್ಯ ತುಣುಕು ಕೂಡಾ ಇದೆ. ಓದಿ….ನೋಡಿ.

ಇಷ್ಟೆಲ್ಲಾ ಸರ್ಕಸ್ಸು ನಡೆಯುವುದು ನಾವು ನೀವು ನಿರಂತರವಾಗಿ ಅವಲಂಬಿತವಾಗಿರುವ ಅಂತರ್ಜಾಲವನ್ನು ಸುರಕ್ಷಿತವಾಗಿಸಲು ಹಾಗೂ ಅದರ ಮೇಲೆ ನಾವಿಟ್ಟಿರುವ ನಂಬಿಕೆಯನ್ನು ಹಾಗೆಯೇ ನಿಲ್ಲಿಸುವುದಕ್ಕಾಗಿ. ಜನರ ಜೀವನಗಳನ್ನು, ದೇಶಗಳ ಸರ್ಕಾರಗಳನ್ನು, ಜಗತ್ತಿನ ಇತಿಹಾಸವನ್ನೇ ಬದಲಾಯಿಸುವಷ್ಟರಮಟ್ಟಿಗೆ ಶಕ್ತಿಶಾಲಿಯಾಗಿರುವ ಅಂತರ್ಜಾಲವನ್ನು ನಂಬಿಕಾರ್ಹ ವೇದಿಕೆಯಾಗಿ ಉಳಿಸುವುದಕ್ಕಾಗಿ. ನಾವು ಇವೆಲ್ಲರ ತಲೆಬಿಸಿಯೇ ಇಲ್ಲದೆ, ಸುಮ್ಮನೆ ಗೂಗಲ್ಲಿಗೆ ಹೋಗಿ ನಮಗೆ ಬೇಕಾದ ವಿಷಯವನ್ನು ಟೈಪಿಸುತ್ತೇವೆ. ಅದು ಉತ್ತರಗಳನ್ನು ಕೊಡುತ್ತದೆ. ನಾವು ಅದನ್ನೇ ನಂಬಿ ಕ್ಲಿಕ್ಕಿಸುತ್ತೇವೆ. ಅಲ್ಲಿ ಏನಿದೆಯೋ ಇಲ್ಲವೋ ಒಂದೂ ಗೊತ್ತಿಲ್ಲದೆ ಗುರುತು ಪರಿಚಯವಿರದ ಹುತ್ತಕ್ಕೆ ಕೈ ಹಾಕುತ್ತೇವೆ. ಅದನ್ನೆಲ್ಲಾ ನಂಬಿಕಾರ್ಹವಾಗಿ ಉಳಿಸುವುದು ICANNನಂತಹ ಕೆಲ ಸಂಸ್ಥೆಗಳು. ಅವರಿಗೊಂದು ಸಣ್ಣ ಥಾಂಕ್ಸ್ ಕೊಡಲೇ ಬೇಕಲ್ಲವೇ?

ಬ್ಲೂಟೂಥಿನ ದಂತಕಥೆ!

ಈಗಿನ ಹುಡುಗ್ರು ಬಿಡ್ರೀ ತುಂಬಾ ಫಾಸ್ಟು. ಮಾತೆತ್ತಿದ್ರೆ ಮೊಬೈಲು, ಕೈಯೆತ್ತಿದ್ರೆ ಕಿಂಡ್ಲ್. ಆ ಹುಡುಗನ ಹತ್ರಾ ಒಳ್ಳೆ ಹಾಡಿದ್ಯಾ, ಯಾವ್ದೋ ಇಂಟರೆಸ್ಟಿಂಗ್ ಪಿಕ್ಚರ್ರಿದ್ಯಾ? ಲೋ ಮಗಾ ನನ್ಗೂ ಕಳ್ಸೋ, ಟೆಥರಿಂಗ್ ಮಾಡ್ತೀನಿ ಅಂತಾರೆ.
ಈ ಮೊಬೈಲ್ ಇಂಟರ್ನೆಟ್, ವೈಫೈ, ನಿಯರ್ ಫೀಲ್ಡ್ ಕಮ್ಯೂನಿಕೇಷನ್ ಇವೆಲ್ಲಾ ಬರೋಕೆ ಮುಂಚೆ (ಓ…ಅಂದ್ರೆ ನಿನ್ ಕಾಲ್ದಲ್ಲಿ ಅಂತಾ ಹುಬ್ಬೇರಿಸ್ತಾ ಇದ್ದೀರಾ, ಇರ್ಲಿ ಬಿಡಿ ತೊಂದ್ರೆ ಇಲ್ಲ  ), ನಮಗೆ ಈ ರೀತಿ ಒಂದು ಮೊಬೈಲಿಂದ ಇನ್ನೊಂದು ಮೊಬೈಲಿಗೆ ಏನಾದ್ರೂ ಕಳಿಸಬೇಕಾದ್ರೆ ಇದ್ದದ್ದು ಒಂದೋ ಸೂಪರ್ ಸ್ಲೋ ಇನ್ಫ್ರಾರೆಡ್ ಕನೆಕ್ಷನ್ ಅಥ್ವಾ ಅಂದಿನ ಕಾಲಕ್ಕೆ ಸೂಪರ್ ಅಲ್ಟ್ರಾ ಹೈ-ಫೈಯಾಗಿದ್ದ ಬ್ಲೂಟೂಥ್. ಈಗ್ಲೂ ಇಷ್ಟೆಲ್ಲಾ ತಂತ್ರಜ್ಞಾನ ಮುಂದುವರೆದ ಮೇಲೂ ಬ್ಲೂಟೂಥ್ ಜನಪ್ರಿಯತೆಯೇನೂ ಕಡಿಯಾಗಿಲ್ಲ. ಇವತ್ತಿಗೂ ನಿಮ್ ಫೋನನ್ನು ಕಾರಿನಲ್ಲಿ ಉಪಯೋಗಿಸಬೇಕು ಅಂದ್ರೆ ಬ್ಲೂಟೂಥ್ ಬೇಕು. ಹೆಚ್ಚಿನ ವೈರ್ಲೆಸ್ ಸ್ಪೀಕರುಗಳು, ಧ್ವನಿಪ್ರಸರಣಕ್ಕೆ ಬ್ಲೂಟೂಥ್ ತಂತ್ರಜ್ಞಾನವನ್ನೇ ಉಪಯೋಗಿಸುತ್ತವೆ. ಬ್ಲೂಟೂಥಿನ ಸುಲಭ ಜೋಡಣೆ ಮತ್ತು ಸಂವಹನ ತಂತ್ರಜ್ಞಾನವೇ ಅದರ ಈ ಜನಪ್ರಿಯತೆಗೆ ಮೂಲ ಕಾರಣ. ಇವತ್ತಿನ ಸಣ್ಣ ಲೇಖನದಲ್ಲಿ ಈ ಬ್ಲೂಟೂಥ್ ಚಾಲ್ತಿಗೆ ಬಂದದ್ದು ಹೇಗೆ? ಅದ್ಯಾಕೆ ಬ್ಕೂಟೂಥಿಗೆ ನೀಲಿಬಣ್ಣದ ಹಲ್ಲು? ಅದಕ್ಕೆ ಬ್ಲೂಟೂಥ್ ಅಂತಾ ಯಾಕೆ ಕರೆಯುತ್ತಾರೆ? ಅದರ ಚಿಹ್ನೆಯ ಹಿಂದಿನ ಅರ್ಥ? ಇದನ್ನು ತಿಳಿಸುವ ಸಣ್ಣ ಪ್ರಯತ್ನ.
ನೋಡೀ….ಈ ಎಂಜಿನಿಯರ್ರುಗಳ ಕಥೇನೇ ಇಷ್ಟು. ಮೊಬೈಲ್ ಕಂಡುಹಿಡಿದು ಅಲ್ಲಿಗೇ ಮುಗಿಸಲಿಲ್ಲ. ಮೊಬೈಲುಗಳೇನೋ ಜನರನ್ನು ಜೋಡಿಸುತ್ತವೆ, ಆದರೆ ಮೊಬೈಲುಗಳನ್ನ ಒಂದಕ್ಕೊಂದು ಹೇಗೆ ಸಂಪರ್ಕಿಸುವುದು ಹೇಗೆ ಅನ್ನೋ ತಲೆಬಿಸಿಯನ್ನ ತಲೆಗೆ ಹಚ್ಕೊಂಡ್ರು. ಬರೇ ಮೊಬಲುಗಳೇ ಯಾಕೆ! ಫೋನು, ಟೀವಿ, ರೇಡಿಯೋ ಮುಂತಾದ ಎಲ್ಲಾ ವಿದ್ಯುನ್ಮಾನ ಯಂತ್ರಗಳೂ ಒಂದಕ್ಕೊಂದು ಮಾತನಾಡುವಂತಾದರೆ!? ಎಂಬ ಕನಸುಗಳನ್ನೂ ಕಟ್ಟಿಕೊಂಡರು. ಆಗ ಶುರುವಾಗಿದ್ದೇ ಪರ್ಸನಲ್ ಏರಿಯಾ ನೆಟ್ವರ್ಕ್ (PAN) ಅನ್ನೋ ಪರಿಕಲ್ಪನೆ. ಇದರನ್ವಯ ಎಂಜಿನಿಯರ್ರುಗಳು ಸುಮಾರು ಐದು ಮೀಟರ್ ಸುತ್ತಳತೆಯಲ್ಲಿ ಮೊಬೈಲುಗಳು ಒಂದದ ಜೊತೆಗೊಂದು ಸಂವಹಿಸಬಲ್ಲುದರ ಬಗ್ಗೆ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ತೊಡಗಿದರು. 90ರ ದಶಕದಲ್ಲಿ ಈ ಪರಿಕಲ್ಪನೆಯನ್ನು ಜನಪ್ರಿಯಗೊಳಿಸಿದ್ದು ಹುಟ್ಟು ಹಾಕಿದ್ದು, ಎರಿಕ್ಸನ್ ಅನ್ನೋ ಸ್ವೀಡಿಶ್ ಕಂಪನಿ. ನಂತರ ಎರಿಕ್ಸನ್, ಐಬಿಎಮ್, ನೋಕಿಯಾ, ತೋಷೀಬಾ ಮತ್ತು ಇಂಟೆಲ್ ಕಂಪನಿಗಳು ಒಟ್ಟು ಸೇರಿ 1996ರಲ್ಲಿ ಮೊಬೈಲ್ ತಂತ್ರಜ್ಞಾನ ವಿಶೇಷಾಸಕ್ತಿ (Special Interest Group) ಗುಂಪೊಂದನ್ನು ಪ್ರಾರಂಭಿಸಿದವು. ಈ ಗುಂಪು ಬ್ಲೂಟೂಥ್ ತಂತ್ರಜ್ಞಾನವನ್ನು ಹುಟ್ಟುಹಾಕುವುದರಲ್ಲಿ, ಅದನ್ನು ಏಕರೂಪವಾಗಿಸುವಲ್ಲಿ ಮತ್ತು ಅದನ್ನು ನಾವಿಂದು ಉಪಯೋಗಿಸುತ್ತಿರುವ ಮಟ್ಟಕ್ಕೆ ತಲುಪುವುದರಲ್ಲಿ ಮಹತ್ತರವಾದ ಕೆಲಸಗಳನ್ನು ಮಾಡಿತು.
ಈ ತಂಡದಲ್ಲಿದ್ದ ಬೇರೆ ಬೇರೆ ಕಂಪನಿಗಳ ಮಧ್ಯೆ ಸಂಧಾನಕಾರನ ಪಾತ್ರ ವಹಿಸಿದ್ದ, ಇಂಟೆಲ್ ಉದ್ಯೋಗಿ ಜಿಮ್ ಕರ್ಡಾಷ್, ಈ ಪ್ರಾಜೆಕ್ಟ್ ಪ್ರಾರಂಭವಾದ ಸಮಯದಲ್ಲಿ ‘ವೈಕಿಂಗ್ಸ್’ ಎಂಬ ಸ್ಕ್ಯಾಂಡಿನೇವಿಯನ್ ಯೋಧರ ಬಗ್ಗೆ ಪುಸ್ತಕವೊಂದನ್ನು ಓದುತ್ತಿದ್ದ. ಅದರಲ್ಲಿ ಉಲ್ಲೇಖಿಸಿದ್ದ ಹೆರಾಲ್ಡ್ ಗ್ರಾಮ್ಸನ್ (ಚಿತ್ರ – ೧) ಎಂಬ ರಾಜನ ಬಗ್ಗೆ ಉತ್ಸುಕನಾಗಿ, ಅವನ ಬಗ್ಗೆ ಹೆಚ್ಚಿನ ವಿಷಯ ಓದಿದಾಗ ಜಿಮ್’ಗೆ ತಿಳಿದದ್ದೇನೆಂದರೆ, ಈ ಹೆರಾಲ್ಡ್ ಗ್ರಾಮ್ಸನ್ 958ರಿಂದ 970ರವರೆಗೆ ‘ವೈಕಿಂಗ್’ಗಳ ರಾಜನಾಗಿದ್ದ ಮತ್ತು ಆತ ಸ್ಕ್ಯಾಂಡಿನೇವಿಯನ್ ದೇಶಗಳನ್ನು (ನಾರ್ವೆ, ಸ್ವೀಡನ್ ಮತ್ತು ಡೆನ್ಮಾರ್ಕ್) ಅಹಿಂಸಾತತ್ವದಿಂದ ಒಗ್ಗೂಡಿಸಲು ಬಹಳಷ್ಟು ಪ್ರಯತ್ನಗಳನ್ನು ಮಾಡಿದ. ವೈಕಿಂಗರು ಸದಾ ಯುದ್ಧ ಮತ್ತು ರಕ್ತಪಾತದಲ್ಲೇ ನಿರತರಾಗಿದ್ದರಿಂದ, ಅಹಿಂಸೆಯ ಮಾತನಾಡಿದ ಹೆರಾಲ್ಡ್ ಸಹಜವಾಗಿಯೇ ವಿಶೇಷವಾಗಿ ಪರಿಗಣಿಸಲ್ಪಟ್ಟ ಹಾಗೂ ಚರಿತ್ರಾಕಾರರು ಅವನ ಬಗ್ಗೆ ಹೆಚ್ಚಾಗಿಯೇ ಬರೆದರು.

ಈ ಹೆರಾಲ್ಡನಿಗೆ ಬ್ಲೂಬೆರ್ರಿ ಹಣ್ಣೆಂದರೆ ಬಹಳ ಇಷ್ಟವಿತ್ತಂತೆ. ಎಷ್ಟು ಇಷ್ಟವೆಂದರೆ, ದಿನವಿಡೀ ಬ್ಲೂಬೆರ್ರಿ ಹಣ್ಣನ್ನೇ ತಿಂದು ಅವನ ಹಲ್ಲುಗಳು ನೀಲಿಬಣ್ಣಕ್ಕೆ ತಿರುಗಿದ್ದವಂತೆ! ಇದರಿಂದಾಗಿ, ಒಂದು ದಂತಕಥೆಯ ಪ್ರಕಾರ (pun intended ), ಅವನ ಪೂರ್ತಿಹೆಸರಾದ ಹೆರಾಲ್ಡ್ ಗ್ರಾಮ್ಸನ್ ಬ್ಲಾಟಂಡ್ (King Harald Gramson Blatand) ಎನ್ನುವುದು ಹೆರಾಲ್ಡ್ ಗ್ರಾಮ್ಸನ್ ಬ್ಲೂಟೂಥ್ ಎಂದೇ ಅನ್ವರ್ಥವಾಗಿತ್ತಂತೆ.
ಈ ಕಥೆ ಕೇಳಿದ ಜಿಮ್ ಕರ್ಡಾಷ್, ಈ ಮೊಬೈಲುಗಳನ್ನು ತಂತಿರಹಿತವಾಗಿ ‘ಒಗ್ಗೂಡಿಸುವ’ ಪ್ರಾಜೆಕ್ಟಿಗೂ ಬ್ಲೂಟೂಥ್ ಎಂಬ ಹೆಸರೇ ಸೂಕ್ತವಾದದ್ದೆಂದು ನಿರ್ಧರಿಸಿದ. ಈ ಕಾರಣದಿಂದ, ಮೊಬೈಲುಗಳನ್ನು (ಅಹಿಂಸಾರೀತಿಯಲ್ಲಿ) ಜೋಡಿಸುವ ಈ ತಂತ್ರಜ್ಞಾನಕ್ಕೆ ಬ್ಲೂಟೂಥ್ ಎಂಬ ಹೆಸರೇ ಅಂಟಿಕೊಂಡಿತು.


ಇನ್ನು ಬ್ಲೂಟೂಥ್ ತಂತ್ರಜ್ಞಾನದ ಚಿಹ್ನೆಗೆ ಬಂದರೆ, ಚಿತ್ರ-೨ರಲ್ಲಿ ತೋರಿಸಿದಂತೆ, ಹೆರಾಲ್ಡ್ ಬ್ಲಾಟಂಡ್ ಅಥವಾ (ಹೆರಾಲ್ಡ್ ಬ್ಲೂಟೂಥ್) ಎಂಬ ಪದಗಳ ಮೊದಲಕ್ಷರಗಳ ಲ್ಯಾಟಿನ್ ಅವತರಣಿಕೆಗಳಾದ (H(Haglazl) and B(Berkanan) ಮಿಶ್ರಣವಷ್ಟೇ.
ನನಗೆ ಈ ಬ್ಲೂಟೂಥ್ ಕಥೆ ಮೊದಲೇ ಗೊತ್ತಿತ್ತು. ಆದರೆ ಇವತ್ತಷ್ಟೇ ಅದರ ಚೆಹ್ನೆಯ ಬಗೆಗೂ ತಿಳಿದು ಬಂದಿದ್ದು. ಅದಕ್ಕೇ ಬರೆಯೋಣವೆನ್ನಿಸಿತು. ಇಷ್ಟವಾದಲ್ಲಿ, ಬೇರೆಯವರಿಗೂ ತಿಳಿಸಿ.

Tuesday, 20 June 2017

ಡಾಟ್ ಕಾಮ್ ಕತೆಗೆ ಹೊಸದೊಂದು ತಿರುವು


ವಿಶ್ವವ್ಯಾಪಿ ಜಾಲ (ವರ್ಲ್ಡ್‌ವೈಡ್ ವೆಬ್) ನಮ್ಮ ಕಣ್ಣಮುಂದೆ ಮಾಹಿತಿಯ ಮಹಾಸಾಗರವನ್ನೇ ತಂದಿಟ್ಟಿದೆಯಲ್ಲ, ಅಷ್ಟೆಲ್ಲ ಮಾಹಿತಿ ನಮಗೆ ದೊರಕುವುದು ವೆಬ್‌ಸೈಟ್, ಅಂದರೆ ಜಾಲತಾಣಗಳ ಮೂಲಕ. ಈ ಜಾಲತಾಣಗಳನ್ನು ಬಹಳಷ್ಟು ಜನ ಗುರುತಿಸುವುದು ಡಾಟ್ ಕಾಮ್‌ಗಳೆಂದೇ.

'ಡಾಟ್ ಕಾಮ್' ಎನ್ನುವುದು ಜಾಲತಾಣಗಳ ಹೆಸರಿಗೆ ಪರ್ಯಾಯವಾಗಿ ಬೆಳೆದುಬಿಟ್ಟಿದ್ದರೂ ವಾಸ್ತವದಲ್ಲಿ ಅದು ಜಾಲತಾಣಗಳ ವಿಳಾಸದ ಒಂದು ಭಾಗವಷ್ಟೇ.

ವಿಶ್ವವ್ಯಾಪಿ ಜಾಲದಲ್ಲಿರುವ ಕೋಟ್ಯಂತರ ತಾಣಗಳನ್ನು ಪ್ರತ್ಯೇಕವಾಗಿ ಗುರುತಿಸುವ ವಿಳಾಸ - ಯೂನಿಫಾರ್ಮ್ ರಿಸೋರ್ಸ್ ಲೊಕೇಟರ್ (ಯುಆರ್‌ಎಲ್) - ಇರುತ್ತದಲ್ಲ, ಅದರ ಕೊನೆಯ ಭಾಗವನ್ನು ಜೆನೆರಿಕ್ ಟಾಪ್ ಲೆವೆಲ್ ಡೊಮೈನ್ (ಜಿಟಿಎಲ್‌ಡಿ) ಎಂದು ಕರೆಯುತ್ತಾರೆ.

ಡಾಟ್ ಕಾಮ್ ಎನ್ನುವುದು ಇಂತಹ ಜಿಟಿಎಲ್‌ಡಿಗಳಲ್ಲೊಂದು. ಡಾಟ್ ಕಾಮ್ ಅಲ್ಲದೆ .net, .org, .biz, .edu ಮುಂತಾದ ಇನ್ನೂ ಅನೇಕ ಜಿಟಿಎಲ್‌ಡಿಗಳು ಬಳಕೆಯಲ್ಲಿವೆ. ಇವಷ್ಟರ ಜೊತೆಗೆ ಜಾಲತಾಣ ಯಾವ ದೇಶದ್ದು ಎಂದು ಸೂಚಿಸುವ ಕಂಟ್ರಿ ಕೋಡ್ ಟಾಪ್ ಲೆವೆಲ್ ಡೊಮೈನ್(ಸಿಸಿಟಿಎಲ್‌ಡಿ)ಗಳೂ ಇವೆ - ಭಾರತಕ್ಕೆ .in, ಫ್ರಾನ್ಸಿನ ತಾಣಗಳಿಗೆ .fr, ಇಟಲಿಗೆ .it - ಹೀಗೆ.

ನಮ್ಮ ಜಾಲತಾಣದ ಹೆಸರು ಏನೇ ಇದ್ದರೂ ವಿಳಾಸದ ಕೊನೆಯ ಭಾಗಕ್ಕೆ ಮೇಲೆ ಹೇಳಿದ ಯಾವುದೋ ಒಂದು ವಿಸ್ತರಣೆಯನ್ನು ಬಳಸಬೇಕಾದ್ದು ಇಲ್ಲಿಯವರೆಗೂ ಅನಿವಾರ್ಯವಾಗಿತ್ತು. ಹಲವಾರು ವರ್ಷಗಳಿಂದ ಹೆಚ್ಚು ಬದಲಾವಣೆಗಳಿಲ್ಲದೆ ನಡೆದುಕೊಂಡುಬಂದಿದ್ದ ಈ ವ್ಯವಸ್ಥೆಗೆ ಇದೀಗ ಬದಲಾವಣೆಯ ಸಮಯ ಬಂದಿದೆ.

ವೆಬ್ ವಿಳಾಸಗಳ ಮೇಲ್ವಿಚಾರಣೆ ನೋಡಿಕೊಳ್ಳುವ ಸಂಸ್ಥೆ ಇಂಟರ್‌ನೆಟ್ ಕಾರ್ಪೊರೇಷನ್ ಫಾರ್ ಅಸೈನ್ಡ್ ನೇಮ್ಸ್ ಆಂಡ್ ನಂಬರ್ಸ್ (ICANN) ಪರಿಚಯಿಸಿರುವ ಹೊಸ ವ್ಯವಸ್ಥೆಯ ಮೂಲಕ ಜಾಲತಾಣದ ಹೆಸರಿನಂತೆ ಅದರ ವಿಸ್ತರಣೆಯನ್ನೂ ನಮ್ಮ ಇಷ್ಟದ ಪ್ರಕಾರ ಆರಿಸಿಕೊಳ್ಳುವುದು ಸಾಧ್ಯವಾಗಿದೆ. ಅಂದರೆ, ಬೆಸ್ಟ್ ಫೋಟೋಗ್ರಫಿ ಎನ್ನುವ ಸಂಸ್ಥೆ ಇದೆ ಅಂದುಕೊಂಡರೆ ಅದರ ಜಾಲತಾಣ www.bestphotography.com ಎಂದೇನೋ ಇರುವ ಬದಲು www.best.photography ಎಂದೇ ಇರುವುದು ಇನ್ನುಮುಂದೆ ಸಾಧ್ಯವಾಗಲಿದೆ.

ಈ ನಿಟ್ಟಿನಲ್ಲಿ ಮೊದಲ ಮಹತ್ವದ ಘಟನೆ ಫೆಬ್ರುವರಿ ೨೦೧೪ರ ಮೊದಲ ವಾರದಲ್ಲಿ ನಡೆದಿದೆ. ಅರೇಬಿಕ್ ಭಾಷೆಯ ತಾಣಗಳಿಗೆ 'ಡಾಟ್ ಶಬಾಕಾ' ಎನ್ನುವ ಹೊಸ ವಿಸ್ತರಣೆ ಇದೀಗ ಲಭ್ಯವಾಗಿದೆ.

ಇಂಗ್ಲಿಷ್ ಭಾಷೆಯಲ್ಲೂ ಹಲವಾರು ಹೊಸ ವಿಸ್ತರಣೆಗಳು ಸಿದ್ಧವಾಗಿದ್ದು ಜಾಲತಾಣಗಳು ಶೀಘ್ರದಲ್ಲೇ ಡಾಟ್ ಕ್ಯಾಮೆರಾ, ಡಾಟ್ ಗ್ರಾಫಿಕ್ಸ್, ಡಾಟ್ ಫೋಟೋಗ್ರಫಿ, ಡಾಟ್ ಪ್ರೆಸ್, ಡಾಟ್ ಬಜ್, ಡಾಟ್ ಇಂಡಿಯನ್ಸ್, ಡಾಟ್ ಟೆಕ್ ಮುಂತಾದ ವಿಸ್ತರಣೆಗಳನ್ನು ಪಡೆದುಕೊಳ್ಳುವುದು ಸಾಧ್ಯವಾಗಲಿದೆ.

ಇಂತಹ ಪ್ರತಿಯೊಂದು ಹೊಸ ಟಾಪ್ ಲೆವೆಲ್ ಡೊಮೈನ್‌ಗೆ ಮಾನ್ಯತೆ ನೀಡಲು ೧.೮೫ ಲಕ್ಷ ಡಾಲರುಗಳ ಶುಲ್ಕ ವಿಧಿಸಲಾಗಿದೆ. ಹಾಗಾಗಿ ಈ ವಿಸ್ತರಣೆಯಿರುವ ಜಾಲತಾಣಗಳನ್ನು ನೋಂದಾಯಿಸಲು ಬಳಕೆದಾರರೂ ಕೊಂಚ ಹೆಚ್ಚಿನ ಬಾಡಿಗೆ ನೀಡಬೇಕಾಗಬಹುದು ಎಂದು ಊಹಿಸಲಾಗಿದೆ.

ಅಂದಹಾಗೆ ಇಂತಹ ವಿಸ್ತರಣೆಗಳಿರುವ ಜಾಲತಾಣದ ವಿಳಾಸಗಳನ್ನು ಬಳಕೆದಾರರಿಗೆ ಲಭ್ಯವಾಗಿಸುವ ಕೆಲಸ ಈಗಾಗಲೇ ಶುರುವಾಗಿದೆ. ವಿವಿಧ ಹೆಸರುಗಳ ಮೇಲೆ ಹಕ್ಕುಸ್ವಾಮ್ಯ ಹೊಂದಿರುವವರಿಗೆ ಪ್ರಥಮ ಆದ್ಯತೆ ಕೊಟ್ಟ ನಂತರ ಇತರರಿಗೂ ಈ ಹೊಸ ವಿಸ್ತರಣೆಗಳಿರುವ ವೆಬ್ ವಿಳಾಸ ನೋಂದಾಯಿಸಿಕೊಳ್ಳುವ ಅವಕಾಶ ಇದೆ.

ನಮ್ಮಿಷ್ಟದ ಹೆಸರು, ನಮ್ಮಿಷ್ಟದ ವಿಸ್ತರಣೆ ಜೊತೆಗೆ ನಮ್ಮ ಭಾಷೆಯಲ್ಲೇ ಜಾಲತಾಣದ ವಿಳಾಸಗಳನ್ನು ನೋಂದಾಯಿಸಿಕೊಳ್ಳುವುದೂ ಈಗಾಗಲೇ ಸಾಧ್ಯವಾಗಿದೆ. ಉದಾಹರಣೆಗೆ ಈ ಲೇಖನದ ಪ್ರಾರಂಭದಲ್ಲಿ ಹೇಳಿರುವ 'ಡಾಟ್ ಶಬಾಕಾ' ವಿಸ್ತರಣೆ ಅರೇಬಿಕ್ ಭಾಷೆಯಲ್ಲೇ ಇದೆ. ಇಂಟರ್‌ನ್ಯಾಶನಲೈಸ್ಡ್ ಡೊಮೈನ್ ನೇಮ್‌ಗಳೆಂದು ಕರೆಸಿಕೊಳ್ಳುವ ಈ ವಿಳಾಸಗಳು ಸಂಪೂರ್ಣವಾಗಿ ಇಂಗ್ಲಿಷೇತರ ಭಾಷೆಗಳಲ್ಲೇ ಇರುವುದು ಸಾಧ್ಯ.

ಅರೇಬಿಕ್ ಜೊತೆಗೆ ಚೈನೀಸ್, ರಷ್ಯನ್, ಥಾಯ್ ಮುಂತಾದ ಇನ್ನೂ ಹಲವು ಭಾಷೆಗಳಲ್ಲಿ ಇಂಟರ್‌ನ್ಯಾಶನಲೈಸ್ಡ್ ಡೊಮೈನ್ ನೇಮ್‌ಗಳನ್ನು ರೂಪಿಸಿಕೊಳ್ಳುವುದು ಸಾಧ್ಯ. ಭಾರತದ ಮಟ್ಟಿಗೆ ತಮಿಳು-ತೆಲುಗು ಸೇರಿ ಕೆಲವು ಭಾಷೆಗಳಿಗಷ್ಟೇ ಸಿಕ್ಕಿರುವ ಈ ಸೌಲಭ್ಯ ಇನ್ನೂ ಕನ್ನಡಕ್ಕೆ ಲಭ್ಯವಾಗದಿರುವುದೊಂದೇ ಬೇಸರದ ಸಂಗತಿ.

ಫೆಬ್ರುವರಿ ೧೪, ೨೦೧೪ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಸೈಬರ್‌ಯುದ್ದ


ಮೊದಲ ವಿಶ್ವಯುದ್ಧ ಪ್ರಾರಂಭವಾಗಿ ಒಂದು ಶತಮಾನ ಕಳೆದ ನೆನಪಿಗೆ ಈ ವರ್ಷ ಸಾಕ್ಷಿಯಾಗಿದೆ. ಅದರೊಡನೆ ಮಹಾಯುದ್ಧದ ಕಹಿನೆನಪುಗಳೂ ಮರಳಿಬಂದಿವೆ. ಕಳೆದ ನೂರು ವರ್ಷಗಳಲ್ಲಿ ವಿಜ್ಞಾನ-ತಂತ್ರಜ್ಞಾನಗಳ ಬೆಳೆದಿರುವ ಪರಿಯನ್ನು ನೆನಪಿಸಿಕೊಂಡರಂತೂ ಇನ್ನೊಂದು ಮಹಾಯುದ್ಧದ ಸಾಧ್ಯತೆಯೇ ನಮ್ಮನ್ನು ಬೆಚ್ಚಿಬೀಳಿಸುತ್ತಿದೆ.

ಹೌದಲ್ಲ, ಈಗ ಇನ್ನೊಂದು ಮಹಾಯುದ್ಧವೇನಾದರೂ ಶುರುವಾದರೆ ಹೇಗಿರಬಹುದು? ಅಣುಬಾಂಬುಗಳು ಸಿಡಿದು, ವಿಷಾನಿಲಗಳು ಎಲ್ಲೆಲ್ಲೂ ಆವರಿಸಿಕೊಂಡು, ಭೂಮಿಯೆಲ್ಲ ಮರಳುಗಾಡಾಗಿ... ಯಾಕೆ ಕೇಳುತ್ತೀರಿ ಆ ಕತೆ? ಎನ್ನುತ್ತೀರಾ?

ಇದೆಲ್ಲ ಹಳೆಯ ಕಲ್ಪನೆ ಎನ್ನುತ್ತಾರೆ ತಜ್ಞರು. ಈಗ ಇನ್ನೊಂದು ವಿಶ್ವಸಮರವೇನಾದರೂ ಪ್ರಾರಂಭವಾದರೆ ಅಂತಹುದೊಂದು ಯುದ್ಧದಲ್ಲಿ ವಿಮಾನಗಳು-ಟ್ಯಾಂಕುಗಳು ಬಂದು ಬಾಂಬು ಸಿಡಿಸುವುದಿಲ್ಲ, ಸೈನಿಕರು ಮುಖಾಮುಖಿಯಾಗಿ ಹೋರಾಡುವುದೂ ಇಲ್ಲ ಎನ್ನುವುದು ಅವರ ಅಭಿಪ್ರಾಯ.

ಹೀಗಿದ್ದರೂ ಯುದ್ಧ ನಡೆಯುತ್ತದೆ ಎಂದು ಅವರು ಹೇಳುತ್ತಾರೆ. ಆದರೆ ಆ ಯುದ್ಧ ನಡೆಯುವುದು ರಣರಂಗದಲ್ಲಲ್ಲ, ಕಂಪ್ಯೂಟರಿನಲ್ಲಿ!

ಕಂಪ್ಯೂಟರ್ ಜಗತ್ತಿಗೆ ಭಯೋತ್ಪಾದನೆ ಹೊಸ ವಿಷಯವೇನಲ್ಲ. ಇಂಟರ್‌ನೆಟ್ ಲೋಕದ ಅಗಾಧ ಸಾಧ್ಯತೆಗಳನ್ನು ದುರುದ್ದೇಶಗಳಿಗಾಗಿ ಬಳಸಿಕೊಳ್ಳುವ ಬೇಕಾದಷ್ಟು ಜನರಿದ್ದಾರೆ. ಯಾರದೋ ಕ್ರೆಡಿಟ್ ಕಾರ್ಡ್ ಮಾಹಿತಿ, ಇಮೇಲ್ ಪಾಸ್‌ವರ್ಡ್ ಇತ್ಯಾದಿಗಳನ್ನೆಲ್ಲ ಕದ್ದು ದುರ್ಬಳಕೆ ಮಾಡಿಕೊಳ್ಳುವ ಕಳ್ಳರಿಂದ ಪ್ರಾರಂಭಿಸಿ ವಿದೇಶಗಳ ರಹಸ್ಯ ಮಾಹಿತಿ ಕದಿಯುವ, ವೆಬ್‌ಸೈಟುಗಳ ಮೇಲೆ ದಾಳಿ ಮಾಡಿ ಬ್ಲ್ಯಾಕ್‌ಮೇಲ್ ಮಾಡುವ ಹೈಟೆಕ್ ಪಾತಕಿಗಳವರೆಗೆ ಅದೆಷ್ಟೋ ಬಗೆಯ ಕ್ರಿಮಿನಲ್‌ಗಳು ಜಾಲಲೋಕದಲ್ಲಿದ್ದಾರೆ. ಸರ್ವರ್‌ಗಳತ್ತ ಭಾರೀ ಪ್ರಮಾಣದ ಮಾಹಿತಿ ಹರಿಬಿಟ್ಟು ಅದರ ಕಾರ್ಯಾಚರಣೆಗೆ ಅಡ್ಡಿಮಾಡುವ ಡಿಸ್ಟ್ರಿಬ್ಯೂಟೆಡ್ ಡಿನಯಲ್ ಆಫ್ ಸರ್ವಿಸ್ ಅಥವಾ ಡಿಡಿಒಎಸ್ ದಾಳಿಯಂತೂ ಬಹಳ ಸಾಮಾನ್ಯವೇ ಆಗಿಬಿಟ್ಟಿದೆ.

ಸಾಮಾನ್ಯವಾಗಿ ಯಾವುದೋ ಸಂಸ್ಥೆ ಅಥವಾ ನಿರ್ದಿಷ್ಟ ಜಾಲತಾಣದ ವಿರುದ್ಧ ನಡೆಯುತ್ತಿದ್ದ ಇಂತಹ ದಾಳಿಗಳು ಒಂದು ದೇಶ ಅಥವಾ ಸರಕಾರದ ವಿರುದ್ಧ ತಿರುಗಿದ ಉದಾಹರಣೆ ೨೦೦೭ರಲ್ಲಿ ಕೇಳಿಬಂತು. ಸೋವಿಯತ್ ಯುಗದ ಸ್ಮಾರಕವೊಂದನ್ನು ಸ್ಥಳಾಂತರಿಸಿತು ಎಂಬ ಕಾರಣಕ್ಕಾಗಿ ಎಸ್ಟೋನಿಯಾ ದೇಶದ ಕಂಪ್ಯೂಟರ್ ವ್ಯವಸ್ಥೆಯ ಮೇಲೆ ರಷ್ಯಾದ ಕುತಂತ್ರಿಗಳು ನಡೆಸಿದ ಈ ದಾಳಿ ಎಸ್ಟೋನಿಯಾದ ಆಡಳಿತ ವ್ಯವಸ್ಥೆಯನ್ನೇ ಅಲುಗಾಡಿಸಿಬಿಟ್ಟಿತ್ತು. ದೇಶದೇಶಗಳ ನಡುವಿನ ಸಮರದ ಹೊಸ ಮುಖವನ್ನು ಜಗತ್ತಿಗೆ ಪರಿಚಯಿಸಿದ ಈ ಘಟನೆಯನ್ನು ಮೊದಲನೇ ವೆಬ್ ಯುದ್ಧ ಎಂದೂ ಗುರುತಿಸಲಾಗುತ್ತದೆ.

ಮುಂದೆ ೨೦೦೮ರಲ್ಲಿ ರಷ್ಯಾ ಹಾಗೂ ಜಾರ್ಜಿಯಾ ನಡುವೆ ಯುದ್ಧ ನಡೆದ ಸಂದರ್ಭದಲ್ಲೂ ಜಾರ್ಜಿಯಾದ ಕಂಪ್ಯೂಟರ್ ವ್ಯವಸ್ಥೆಯ ಮೇಲೆ - ಜಾಲತಾಣಗಳ ಮೇಲೆ ದೊಡ್ಡಪ್ರಮಾಣದಲ್ಲೇ ದಾಳಿ ನಡೆದಿತ್ತು.

ಆದರೆ ಈ ಬಗೆಯ ಯುದ್ಧಗಳು ಎಷ್ಟೇ ಗಂಭೀರವಾದರೂ ಅದರಿಂದ ಆಗುವ ಹಾನಿಯ ಬಹುಪಾಲು ಡಿಜಿಟಲ್ ಪ್ರಪಂಚಕ್ಕಷ್ಟೆ ಸೀಮಿತವಾಗಿತ್ತು. ಹಾಗಾಗಿ ನಮಗೂ ಕಂಪ್ಯೂಟರಿಗೂ ಸಂಬಂಧವಿಲ್ಲ ಎನ್ನುವವರು ಆ ನಿಟ್ಟಿನಲ್ಲಿ ತಲೆಕೆಡಿಸಿಕೊಳ್ಳದಿದ್ದರೂ ಪರವಾಗಿರಲಿಲ್ಲ; ದೈನಂದಿನ ಬದುಕಿನ ಪ್ರತಿ ಹಂತದಲ್ಲೂ ಕಂಪ್ಯೂಟರ್ ಬಳಸುವ, ಇಂಟರ್‌ನೆಟ್ ಮೂಲಕವೇ ಮತದಾನ ಮಾಡುವ ಎಸ್ಟೋನಿಯಾದಂತಹ ದೇಶಕ್ಕೆ ಇದು ತೊಂದರೆಮಾಡಬಹುದು, ಆದರೆ ಕಂಪ್ಯೂಟರಿನ ಕಡತವೂ ಕೆಂಪುಪಟ್ಟಿಯೊಳಗೆ ಸೇರಿ ಟೇಬಲ್ಲಿನಿಂದ ಟೇಬಲ್ಲಿಗೆ ಅಲೆಯುವ ನಮ್ಮ, ಹಾಗೂ ನಮ್ಮಂತಹ ಇನ್ನೆಷ್ಟೋ ದೇಶಗಳಿಗೆ ವೆಬ್ ಯುದ್ಧ ಏನು ತಾನೆ ಮಾಡಬಲ್ಲದು ಎಂಬ ಭಾವನೆ ವ್ಯಾಪಕವಾಗಿತ್ತು.

ಆದರೆ ಈಚಿನ ಕೆಲ ಘಟನೆಗಳನ್ನು ಗಮನಿಸಿದರೆ ಇಂತಹ ಉದಾಸೀನ ಮನೋಭಾವ ಬಹಳ ಸಮಯ ಉಳಿಯುವಂತಿಲ್ಲವೇನೋ ಎನ್ನಿಸುತ್ತಿದೆ.

ಕಂಪ್ಯೂಟರಿಗೆ ಕನ್ನಹಾಕಿ ದೇಶದ ರಹಸ್ಯಗಳನ್ನೆಲ್ಲ ಯಾರಾದರೂ ಕದಿಯುವುದು ಸಣ್ಣ ವಿಷಯವೇನಲ್ಲ, ನಿಜ. ಆದರೆ ರೈಲು-ವಿಮಾನ ಸಂಚಾರ ವ್ಯವಸ್ಥೆಯನ್ನೋ ವಿದ್ಯುತ್ ಜಾಲವನ್ನೋ ಅಣುಶಕ್ತಿ ಕೇಂದ್ರಗಳನ್ನೋ ಬಾಹ್ಯಾಕಾಶ ಯೋಜನೆಯನ್ನೋ ನಿಯಂತ್ರಿಸುವ ಕಂಪ್ಯೂಟರ್ ವ್ಯವಸ್ಥೆಯ ಮೇಲೆ ಶತ್ರುಗಳು ದಾಳಿಮಾಡಿದರೆ ನಮ್ಮ ನಿಮ್ಮಂತಹ ಜನಸಾಮಾನ್ಯರ ಕತೆಯೇನಾಗಬಹುದು?

ಕಂಪ್ಯೂಟರ್ ಸುರಕ್ಷತಾ ತಜ್ಞರು ಭಯಪಡುತ್ತಿರುವ ಇಂತಹ ದಾಳಿಗಳೇನಾದರೂ ನಡೆದರೆ ಕಲ್ಪಿಸಿಕೊಳ್ಳಲೂ ಭಯವಾಗುವ ಇಂತಹ ಪರಿಸ್ಥಿತಿ ನಿಜಕ್ಕೂ ಸೃಷ್ಟಿಯಾಗಲಿದೆಯಂತೆ. ವಿದ್ಯುತ್ ಉತ್ಪಾದನಾ ಕೇಂದ್ರಗಳಿಂದ ಪ್ರಾರಂಭಿಸಿ ವಿಮಾನ ಸಂಚಾರ ನಿಯಂತ್ರಣ ವ್ಯವಸ್ಥೆಯವರೆಗೆ ಆಧುನಿಕ ತಂತ್ರಜ್ಞಾನ ಬಳಸುವ ಯಾವುದೇ ಕ್ಷೇತ್ರದ ಮೇಲೂ ಇಂತಹ ದಾಳಿ ನಡೆಯಬಹುದು ಎಂದು ಅವರು ಹೇಳುತ್ತಾರೆ. ಯಂತ್ರೋಪಕರಣಗಳ ನಿರ್ವಹಣೆಯಲ್ಲಿ ಕಂಪ್ಯೂಟರುಗಳ ಬಳಕೆ ವ್ಯಾಪಕವಾಗುತ್ತಿರುವುದು ಅವರ ಈ ಭೀತಿಗೆ ಕಾರಣ.

ಇಂತಹ ಕಂಪ್ಯೂಟರುಗಳ ನಡುವೆ ಸಂಪರ್ಕ ಏರ್ಪಡಿಸಿಕೊಳ್ಳಲು ಕಂಪ್ಯೂಟರ್ ಜಾಲಗಳ ಬಳಕೆಯಾಗುತ್ತದಲ್ಲ, ತೊಂದರೆ ಶುರುವಾಗುವುದೇ ಅಲ್ಲಿ. ಅಂತರಜಾಲದ ಮೂಲಕ ಯಾರಾದರೂ ಕುತಂತ್ರಿಗಳು ಇಂತಹ ಜಾಲದೊಳಕ್ಕೆ ತಲೆಹಾಕಿದರೆಂದರೆ ಅಲ್ಲಿ ಸಮಸ್ಯೆ ಕಾಣಿಸಿಕೊಂಡಿತೆಂದೇ ಅರ್ಥ!

ಸಿದ್ಧಾಂತಗಳಿಗೆ, ಹೆಚ್ಚೆಂದರೆ ಪ್ರಯೋಗಾಲಯಕ್ಕಷ್ಟೆ ಸೀಮಿತವಾಗಿದ್ದ ಇಂತಹುದೊಂದು ಸಾಧ್ಯತೆ ನಿಜಜೀವನದಲ್ಲಿ ಕಾಣಿಸಿಕೊಂಡಿದ್ದು, ಜಗತ್ತನ್ನು ಬೆಚ್ಚಿಬೀಳಿಸಿದ್ದು ೨೦೧೦ರಲ್ಲಿ. ಆ ವರ್ಷದಲ್ಲಿ ಪತ್ತೆಯಾದ ಸ್ಟಕ್ಸ್‌ನೆಟ್ ಎಂಬ ಕುತಂತ್ರಾಂಶದ ಗುರಿಯಾಗಿದ್ದದ್ದು ಇರಾನ್ ದೇಶದ ಅಣುಶಕ್ತಿ ಕಾರ್ಯಕ್ರಮ. ಅಲ್ಲಿನ ಅಣುಶಕ್ತಿ ಕೇಂದ್ರವೊಂದರ ಯುರೇನಿಯಂ ಸೆಂಟ್ರಿಫ್ಯೂಜ್‌ಗಳನ್ನು ನಿಯಂತ್ರಿಸುತ್ತಿದ್ದ ಕಂಪ್ಯೂಟರಿನೊಳಗೆ ಸೇರಿಕೊಂಡಿದ್ದ ಈ ಕುತಂತ್ರಾಂಶ ಅವು ಪದೇ ಪದೇ ಕೆಡಲು ಕಾರಣವಾಗಿತ್ತು. ಈ ಕುತಂತ್ರಾಂಶದ ಹಾವಳಿಯಿಂದಾಗಿ ಇರಾನಿನ ಅಣುಶಕ್ತಿ ಯೋಜನೆ ಕನಿಷ್ಠ ಎರಡು ವರ್ಷದಷ್ಟಾದರೂ ಹಿಂದುಳಿಯುವಂತಾಯಿತು ಎಂದು ಅಂದಾಜುಗಳು ಹೇಳುತ್ತವೆ. ಅಮೇರಿಕಾ ಹಾಗೂ ಇಸ್ರೇಲ್ ದೇಶಗಳು ಈ ಕುತಂತ್ರಾಂಶದ ಹಿಂದಿನ ಶಕ್ತಿಗಳಿರಬೇಕೆಂದು ಶಂಕಿಸಲಾಗಿತ್ತು. ಇವೆರಡು ದೇಶಗಳ ಬೆಂಬಲದಿಂದಲೇ ಸೃಷ್ಟಿಯಾಗಿದೆ ಎಂದು ಹೇಳಲಾಗಿರುವ 'ಫ್ಲೇಮ್' ಎಂಬ ಇನ್ನೊಂದು ಕುತಂತ್ರಾಂಶವೂ ಸಾಕಷ್ಟು ಸುದ್ದಿಮಾಡಿತ್ತು. ಸ್ಟಕ್ಸ್‌ನೆಟ್‌ನಂತೆಯೇ ಈ ಕುತಂತ್ರಾಂಶ ಕೂಡ ಇರಾನಿನ ಅಣುಶಕ್ತಿ ಕಾರ್ಯಕ್ರಮವನ್ನೇ ತನ್ನ ಗುರಿಯಾಗಿಸಿಕೊಂಡಿತ್ತು ಎನ್ನಲಾಗಿದೆ.

ಅಮೆರಿಕಾ, ಇಸ್ರೇಲ್, ಇರಾನ್‌ಗಳಷ್ಟೆ ಅಲ್ಲ, ನಮ್ಮ ನೆರೆಯ ಚೀನಾ ಸೇರಿದಂತೆ ಇನ್ನೂ ಅನೇಕ ದೇಶಗಳು ಕೂಡ ವೆಬ್ ಯುದ್ಧದಲ್ಲಿ ತೊಡಗಿಕೊಂಡಿರುವ ಶಂಕೆ ದಟ್ಟವಾಗಿದೆ. ಚೀನಾ ದೇಶ ಹಲವು ಸಂದರ್ಭಗಳಲ್ಲಿ ಸ್ವತಃ ಸೈಬರ್ ದಾಳಿಗಳಿಗೆ ತುತ್ತಾಗಿರುವುದು ನಿಜವೇ ಆದರೂ ಅದು ಇತರರ ವಿರುದ್ಧ ಡಿಜಿಟಲ್ ಪ್ರಪಂಚದಲ್ಲಿ ಸಮರ ಸಾರಿರುವ ಹಾಗೂ ಗೌಪ್ಯ ಮಾಹಿತಿಯ ಕಳವಿಗೆ ಪ್ರಯತ್ನಿಸುತ್ತಿರುವ ಬಗೆಗೂ ಹಲವಾರು ಆರೋಪಗಳಿವೆ. ಕೆಲವು ಪ್ರಮುಖ ಕ್ಷೇತ್ರಗಳ ತಂತ್ರಜ್ಞಾನಕ್ಕಾಗಿ ಆ ದೇಶದ ಮೇಲೆ ಅವಲಂಬಿತವಾಗಿರುವ ನಮ್ಮ ದೇಶವಂತೂ ಎಷ್ಟು ಎಚ್ಚರದಿಂದಿದ್ದರೂ ಕಡಿಮೆಯೇ!

ಚೀನಾ ಕುರಿತಂತೆ ಇಂತಹ ಆರೋಪ ಇತ್ತೀಚೆಗೆ ಕೇಳಿಬಂದದ್ದು ಅಮೆರಿಕಾದ ಸಂಸ್ಥೆಯೊಂದರ ಮೇಲೆ ನಡೆದ ಸೈಬರ್ ದಾಳಿಗಳ ಸಂದರ್ಭದಲ್ಲಿ. ಪಳೆಯುಳಿಕೆ ಇಂಧನಗಳಿಗೆ ಪರ್ಯಾಯವಾಗಿ ಹೊಸದೊಂದು ಇಂಧನಮೂಲವನ್ನು ರೂಪಿಸುತ್ತಿರುವ ಆ ಸಂಸ್ಥೆಯಿಂದ ಸಂಶೋಧನೆಗೆ ಸಂಬಂಧಪಟ್ಟ ಮಾಹಿತಿಯನ್ನು ಕದಿಯಲು ಚೀನಾ ಪ್ರಯತ್ನಿಸುತ್ತಿತ್ತು ಎನ್ನಲಾಗಿದೆ.

ಹಾಗೆಂದಮಾತ್ರಕ್ಕೆ ಕಂಪ್ಯೂಟರ್ ಆಧರಿತ ಭಯೋತ್ಪಾದನೆಯೆಲ್ಲ ರಾಷ್ಟ್ರರಾಷ್ಟ್ರಗಳ ನಡುವೆ ದೊಡ್ಡ ಪ್ರಮಾಣದಲ್ಲಷ್ಟೆ ನಡೆಯುವಂಥದ್ದು ಎನ್ನುವಂತಿಲ್ಲ. ವಾಣಿಜ್ಯ ಹಾಗೂ ಕೆಲವೊಮ್ಮೆ ವೈಯಕ್ತಿಕ ಉದ್ದೇಶಗಳಿಂದಲೂ ಕಂಪ್ಯೂಟರ್ ಒಂದು ಭಯೋತ್ಪಾದನೆಯ ಅಸ್ತ್ರವಾಗಿ ಬಳಕೆಯಾಗಬಲ್ಲದು.

ಡಿಸ್ಟ್ರಿಬ್ಯೂಟೆಡ್ ಡಿನಯಲ್ ಆಫ್ ಸರ್ವಿಸ್ (ಡಿಡಿಓಎಸ್) ದಾಳಿಗಳನ್ನು ಇಲ್ಲಿ ಉದಾಹರಿಸುವುದು ಸಾಧ್ಯ. ಕುತಂತ್ರಾಂಶಗಳ ಸಹಾಯದಿಂದ ಕೃತಕ ಮಾಹಿತಿಯ ಪ್ರವಾಹವನ್ನು ಸೃಷ್ಟಿಸುವ ಬ್ಲ್ಯಾಕ್‌ಮೇಲ್ ತಂತ್ರ ಇದು. ಇಂತಹ ದಾಳಿಗೆ ಗುರಿಯಾದ ವ್ಯವಸ್ಥೆ ಅಪಾರ ಪ್ರಮಾಣದ ಅನಗತ್ಯ ಮಾಹಿತಿಯನ್ನು ನಿರ್ವಹಿಸಬೇಕಾಗಿ ಬರುವುದರಿಂದ ಅದರ ಕಾರ್ಯಾಚರಣೆ ಬಲು ನಿಧಾನವಾಗಿಬಿಡುತ್ತದೆ. ಇಂತಹ ದಾಳಿಗಳು ಹೆಚ್ಚುಕಾಲ ಮುಂದುವರೆದದ್ದೇ ಆದರೆ ಮಾಹಿತಿಯ ಮಿತಿಮೀರಿದ ಒತ್ತಡದಿಂದಾಗಿ ದಾಳಿಗೀಡಾದ ವ್ಯವಸ್ಥೆ ಸಂಪೂರ್ಣವಾಗಿ ಸ್ಥಗಿತಗೊಳ್ಳುವ ಸಾಧ್ಯತೆಯೂ ಇರುತ್ತದೆ.

ಅನಪೇಕ್ಷಿತ ಇಮೇಲ್ ಸಂದೇಶಗಳನ್ನು ('ಸ್ಪಾಮ್') ಕಳುಹಿಸುವ ದಂಧೆಯಂತೆಯೇ ಈ ದಾಳಿಗಳಲ್ಲೂ ಸ್ಪೈವೇರ್‌ಗಳು ಹಾಗೂ ಬಾಟ್‌ನೆಟ್‌ಗಳ ಬಳಕೆ ಸಾಮಾನ್ಯ.

ಗೂಢಚಾರಿ ತಂತ್ರಾಂಶ ಅಥವಾ ಸ್ಪೈವೇರ್, ವೈರಸ್-ವರ್ಮ್ ಇತ್ಯಾದಿಗಳಂತೆ ಕಂಪ್ಯೂಟರ್ ಲೋಕವನ್ನು ಕಾಡುವ ಕುತಂತ್ರಾಂಶಗಳಲ್ಲೊಂದು. ಇವು ಸಾಮಾನ್ಯವಾಗಿ ಉಪಯುಕ್ತ ತಂತ್ರಾಂಶಗಳ ಸೋಗಿನಲ್ಲಿ ಬಳಕೆದಾರರ ಕಂಪ್ಯೂಟರನ್ನು ಪ್ರವೇಶಿಸುತ್ತವೆ. ಬಳಕೆದಾರರ ಕಂಪ್ಯೂಟರನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಅದನ್ನು ತಮ್ಮ ಕುಕೃತ್ಯಗಳಿಗೆ ಬಳಸಿಕೊಳ್ಳುವಲ್ಲಿ ಇವು ಕುತಂತ್ರಿಗಳಿಗೆ ನೆರವಾಗುತ್ತವೆ. ಪ್ರತಿ ಬಾರಿ ಕಂಪ್ಯೂಟರನ್ನು ಚಾಲೂ ಮಾಡಿದಾಗಲೂ ಸಕ್ರಿಯವಾಗುವ ಈ ತಂತ್ರಾಂಶ ಹ್ಯಾಕರ್‌ನ ಆದೇಶಗಳನ್ನು ಪಾಲಿಸಲು ಪ್ರಾರಂಭಿಸುತ್ತದೆ; ಅಂದರೆ ಆ ಕಂಪ್ಯೂಟರ್ ಒಂದು 'ಬಾಟ್' ಆಗಿ ಬದಲಾಗುತ್ತದೆ (ಬಾಟ್ ಎನ್ನುವುದು ರೋಬಾಟ್ ಎಂಬ ಹೆಸರಿನ ಅಪಭ್ರಂಶ). ಪ್ರಪಂಚದಾದ್ಯಂತ ಇರುವ ಇಂತಹ ನೂರಾರು-ಸಾವಿರಾರು ಬಾಟ್‌ಗಳನ್ನು ಒಗ್ಗೂಡಿಸಿದ 'ಬಾಟ್‌ನೆಟ್'ಗಳೆಂಬ ಜಾಲಗಳೂ ಸಿದ್ಧವಾಗುತ್ತವೆ. ಇಂತಹ ಜಾಲದಲ್ಲಿ ನಮ್ಮನಿಮ್ಮಂತಹ ಸಾಮಾನ್ಯ ಬಳಕೆದಾರರ ಕಂಪ್ಯೂಟರುಗಳೇ ಕುತಂತ್ರಿಗಳ ಹಿಡಿತಕ್ಕೆ ಸಿಕ್ಕು - ನಮಗೆ ಗೊತ್ತಿಲ್ಲದಂತೆ - ಸಮಾಜವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡುಬಿಟ್ಟಿರುತ್ತವೆ!

ಡಿಡಿಒಎಸ್ ದಾಳಿಗೆ ತುತ್ತಾಗುವ ತಾಣಗಳಿಗೆ ಅಪಾರ ಪ್ರಮಾಣದ ಮಾಹಿತಿ ಹರಿದುಬರುವುದು ಇವೇ ಬಾಟ್‌ನೆಟ್‌ಗಳಿಂದ. ಈ ಜಾಲದ ಅಂಗವಾದ ಕಂಪ್ಯೂಟರುಗಳು ಜಗತ್ತಿನ ಯಾವ ಮೂಲೆಯಲ್ಲಿ ಬೇಕಾದರೂ ಇರಬಹುದಾದ್ದರಿಂದ - ಹಾಗೂ ಅವುಗಳು ದುರ್ಬಳಕೆಯಾಗುತ್ತಿರುವುದು ಅವುಗಳ ಮಾಲಿಕರಿಗೆ ಗೊತ್ತಿಲ್ಲದಿರುವ ಸಾಧ್ಯತೆಯೇ ಹೆಚ್ಚಿರುವುದರಿಂದ - ಅನೇಕ ಸನ್ನಿವೇಶಗಳಲ್ಲಿ ನಿಜವಾದ ಅಪರಾಧಿಯ ಪತ್ತೆಯಾಗುವುದೇ ಇಲ್ಲ.

ಇಂತಹ ದಾಳಿಗಳನ್ನು ನಡೆಸುವುದರಿಂದ ಅದರ ಹಿಂದಿರುವ ಕುತಂತ್ರಿಗಳಿಗೆ ಆಗುವ ಲಾಭಗಳು ಹಲವು ಬಗೆಯವು. ಈ ದಾಳಿಗೆ ತುತ್ತಾದ ಜಾಲತಾಣ ನಿಷ್ಕ್ರಿಯವಾದರೆ ಅವರ ಮೊದಲ ಉದ್ದೇಶ ಪೂರ್ಣವಾದಂತೆ - ಯಾವುದೋ ಸಂಘಸಂಸ್ಥೆಯ ತಾಣವಾದರೆ ಅವರಿಗೆ ಆಗುವ ಅವಮಾನ ಇಲ್ಲವೇ ವಾಣಿಜ್ಯ ಉದ್ದೇಶದ ತಾಣವಾದರೆ ಅವರಿಗೆ ಆಗುವ ನಷ್ಟ ಕುತಂತ್ರಿಗಳಿಗೆ ಸಮಾಧಾನ ನೀಡುತ್ತದೆ. ತಮ್ಮ ವಿರುದ್ಧ ಕೆಲಸಮಾಡುತ್ತಿರುವ ಸಂಸ್ಥೆಗಳಿಗೆ (ಉದಾ: ಸೈಬರ್ ಕ್ರಿಮಿನಲ್‌ಗಳ ವಿರುದ್ಧ ಕ್ರಮ ಕೈಗೊಳ್ಳುವ ಸಂಸ್ಥೆ) ತೊಂದರೆ ಕೊಡಲು ಡಿಡಿಒಎಸ್ ದಾಳಿಗಳನ್ನು ಬಳಸುವ ದುಷ್ಕರ್ಮಿಗಳೂ ಇದ್ದಾರೆ. ಇನ್ನು ಕೆಲವು ಸಂದರ್ಭಗಳಲ್ಲಿ ದಾಳಿ ನಿಲ್ಲಿಸಿ ಜಾಲತಾಣ ಮತ್ತೆ ಕೆಲಸಮಾಡುವಂತೆ ಮಾಡಲು ಅವರು ಹಣಕ್ಕಾಗಿ ಬೇಡಿಕೆಯಿಡುವುದೂ ಉಂಟು.

ಒತ್ತೆಹಣಕ್ಕೆ ಬೇಡಿಕೆಯಿಟ್ಟು ಬ್ಲ್ಯಾಕ್‌ಮೇಲ್ ಮಾಡುವ ಈ ಅಭ್ಯಾಸ ಸಂಸ್ಥೆಗಳನ್ನಷ್ಟೇ ಅಲ್ಲದೆ ಸಾಮಾನ್ಯ ಬಳಕೆದಾರರನ್ನೂ ಕಾಡುವುದು ಸಾಧ್ಯವಿದೆ. ಕುತಂತ್ರಾಂಶಗಳನ್ನು ಬಳಕೆದಾರರ ಕಂಪ್ಯೂಟರಿನೊಳಗೆ ಹರಿಯಬಿಡುವ ಕುತಂತ್ರಿಗಳು ಅದರಲ್ಲಿರುವ ಕಡತಗಳನ್ನು ಬಳಸಲಾಗದಂತೆ ಮಾಡಿ ಹಣಕ್ಕಾಗಿ ಬೇಡಿಕೆಯಿಡುವುದು ಸಾಮಾನ್ಯ ಅಭ್ಯಾಸ.

'ರ್‍ಯಾನ್‌ಸಮ್‌ವೇರ್' ಎಂದು ಕರೆಸಿಕೊಳ್ಳುವ ಈ ತಂತ್ರಾಂಶಗಳ ಹಾವಳಿಗೆ ಅಷ್ಟಿಷ್ಟಲ್ಲ. ಕ್ರಿಪ್ಟೋವಾಲ್ ಎಂಬ ಇಂತಹ ತಂತ್ರಾಂಶವೊಂದು ೨೦೧೪ರ ಮೊದಲ ಆರು ತಿಂಗಳುಗಳಲ್ಲೇ ಲಕ್ಷಾಂತರ ಕಂಪ್ಯೂಟರುಗಳನ್ನು ಸೇರಿಕೊಂಡು ಸುಮಾರು ಐದು ನೂರು ಕೋಟಿ ಕಡತಗಳನ್ನು ಬಳಸಲಾಗದಂತೆ ಮಾಡಿತ್ತು ಎನ್ನಲಾಗಿದೆ. ಈ ಕುತಂತ್ರಾಂಶವನ್ನು ಸೃಷ್ಟಿಸಿದವರು ಈ ಅವಧಿಯಲ್ಲಿ ಸುಮಾರು ಹತ್ತು ಲಕ್ಷ ಅಮೆರಿಕನ್ ಡಾಲರುಗಳಷ್ಟು ಹಣವನ್ನು ಕಂಪ್ಯೂಟರ್ ಬಳಕೆದಾರರಿಂದ ವಸೂಲಿ ಮಾಡಿದ್ದರಂತೆ!

ಇನ್ನು ವೈರಸ್ - ವರ್ಮ್ ಮುಂತಾದ ಕುತಂತ್ರಾಂಶಗಳ ಹಾವಳಿಯ ಬಗೆಗಂತೂ ನಮಗೆ ಗೊತ್ತೇ ಇದೆ. ಹಣಕಾಸಿನ ವ್ಯವಹಾರ ಮಾಡುವ ಇಲ್ಲವೇ ಖಾಸಗಿ ಮಾಹಿತಿಯನ್ನು ಹಂಚಿಕೊಳ್ಳುವ ಸಂದರ್ಭಗಳಲ್ಲೆಲ್ಲ ಹೊಂಚು ಹಾಕಿ ಮಾಹಿತಿ ಕದಿಯುವುದು ಈ ತಂತ್ರಾಂಶಗಳ ದುರುದ್ದೇಶ. ಆನ್‌ಲೈನ್ ಬ್ಯಾಂಕಿಂಗ್ ಇಲ್ಲವೇ ಕ್ರೆಡಿಟ್ ಕಾರ್ಡಿಗೆ ಸಂಬಂಧಪಟ್ಟ ವಿವರಗಳು ಸಿಕ್ಕರೆ ಅದನ್ನು ದುರುಪಯೋಗಪಡಿಸಿಕೊಳ್ಳುವ ಕುತಂತ್ರಿಗಳು ಇಮೇಲ್ ಖಾತೆಯ ಯೂಸರ್‌ನೇಮ್ ಪಾಸ್‌ವರ್ಡ್ ಇತ್ಯಾದಿಗಳು ಸಿಕ್ಕರೂ ಸುಮ್ಮನಿರುವುದಿಲ್ಲ - ಅದರಿಂದ ಇನ್ನಾರಿಗೋ ಸಂದೇಶ ಕಳುಹಿಸಿ ಅಲ್ಲೇನಾದರೂ ಲಾಭ ಸಿಗಬಹುದೇ ನೋಡುತ್ತಾರೆ. ಇಲ್ಲವೇ ಆ ಖಾತೆಯನ್ನು ಬಳಸಿಕೊಂಡು ಬ್ಯಾಂಕ್ ಖಾತೆಯ ವಿವರವನ್ನೋ ಕ್ರೆಡಿಟ್‌ಕಾರ್ಡ್ ಪಾಸ್‌ವರ್ಡನ್ನೋ ಪತ್ತೆಮಾಡಲು ಯತ್ನಿಸುತ್ತಾರೆ (ಪಾಸ್‌ವರ್ಡ್ ರೀಸೆಟ್ ಇತ್ಯಾದಿಗಳಿಗೆ ನಾವು ಅದೇ ಇಮೇಲ್ ವಿಳಾಸ ಕೊಟ್ಟಿರುತ್ತೇವಲ್ಲ!).

ನಾವು ಕಂಪ್ಯೂಟರ್ ಬಳಸುವುದೇ ಇಲ್ಲ ಎನ್ನುವವರೂ ಈ ಕಾಟದಿಂದ ಪೂರ್ತಿಯಾಗಿ ತಪ್ಪಿಸಿಕೊಳ್ಳುವುದು ಕಷ್ಟ - ಮೊಬೈಲ್ ದೂರವಾಣಿಗಳು ಅಂಗೈ ಮೇಲಿನ ಕಂಪ್ಯೂಟರುಗಳಾಗಿ ಬೆಳೆದುಬಿಟ್ಟಿವೆಯಲ್ಲ, ಕಂಪ್ಯೂಟರುಗಳನ್ನು ಬಾಧಿಸುವ ಸಮಸ್ತ ತೊಂದರೆಗಳು ಅವನ್ನೂ ಕಾಡುತ್ತವೆ.

ಕಂಪ್ಯೂಟರನ್ನು ಬಳಸುವುದಿಲ್ಲ, ಮೊಬೈಲ್ ಕಾಟವೂ ಇಲ್ಲ ಅನ್ನುವವರ ಮಾಹಿತಿ ಸುರಕ್ಷತೆಯೂ ಖಾತರಿಯೇನಲ್ಲ. ವಿವಿಧ ಕಾರಣಗಳಿಂದಾಗಿ (ಆಸ್ಪತ್ರೆ, ಬ್ಯಾಂಕು, ಸರಕಾರಿ ಯೋಜನೆ ಇತ್ಯಾದಿ) ಒಂದಲ್ಲ ಒಂದು ದತ್ತಸಂಚಯದಲ್ಲಿ ಸೇರಿಕೊಳ್ಳುವ ನಮ್ಮ ಮಾಹಿತಿಯನ್ನು ನಿರ್ವಹಿಸುವವರು ಕೊಂಚ ತಪ್ಪುಮಾಡಿದರೂ ಸಾಕು, ಅದು ಬಹಳ ಸುಲಭವಾಗಿ ಕುತಂತ್ರಿಗಳ ಕೈವಶವಾಗಿಬಿಡುತ್ತದೆ. ಕಂಪ್ಯೂಟರ್ ಬಳಕೆದಾರರಿಗಂತೂ ಈ ಸಮಸ್ಯೆ ಇನ್ನೂ ವ್ಯಾಪಕವಾದದ್ದು. ಆನ್‌ಲೈನ್ ಗೇಮಿಂಗ್, ಶಾಪಿಂಗ್, ಚಾಟಿಂಗ್ - ಹೀಗೆ ಎಲ್ಲಿ ಶೇಖರವಾಗಿರುವ ಮಾಹಿತಿ ಬೇಕಿದ್ದರೂ ಅಪಾತ್ರರ ಪಾಲಾಗುವುದು ಸಾಧ್ಯವಿದೆ. 

ಟೀವಿ, ಫ್ರಿಜ್, ಕ್ಯಾಮೆರಾ, ಮೈಕ್ರೋವೇವ್ ಓವನ್ - ಹೀಗೆ ಮನೆಯಲ್ಲಿರುವ ಉಪಕರಣಗಳಿಗೆಲ್ಲ ಅಂತರಜಾಲ ಸಂಪರ್ಕ ಕೊಟ್ಟು ಅವನ್ನೆಲ್ಲ 'ಸ್ಮಾರ್ಟ್' ಮಾಡಲು ಹೊರಟಿರುವ 'ಇಂಟರ್‌ನೆಟ್ ಆಫ್ ಥಿಂಗ್ಸ್' ಪರಿಕಲ್ಪನೆಯಿದೆಯಲ್ಲ, ಅದೂ ಕೂಡ ಸೈಬರ್ ದುಷ್ಕರ್ಮಿಗಳ ಕೈಯಲ್ಲಿ ಹೊಸದೊಂದು ಅಸ್ತ್ರವಾಗಿಬಿಡುವ ಅಪಾಯವಿದೆ. ಅಂತರಜಾಲದ ಮೂಲಕ ಮನೆಯ ಚಿತ್ರಗಳನ್ನು ಬಿತ್ತರಿಸುವ ಐಪಿ ಕ್ಯಾಮೆರಾಗಳನ್ನು ದುಷ್ಕರ್ಮಿಗಳು ಹ್ಯಾಕ್ ಮಾಡಿದ ಕೆಲ ಘಟನೆಗಳು ಈಗಾಗಲೇ ವರದಿಯಾಗಿವೆ. ಅಂತರಜಾಲ ಸಂಪರ್ಕವಿರುವ ಟೀವಿ, ಫ್ರಿಜ್ ಮುಂತಾದ ಸಾಧನಗಳು ಸ್ಪಾಮ್ ಸಂದೇಶಗಳನ್ನು ಕಳುಹಿಸಲು ಅಥವಾ ವೈರಸ್ ಹರಡಲು ಬಳಕೆಯಾಗುವ ಸಾಧ್ಯತೆಗಳ ಬಗೆಗೂ ಅಧ್ಯಯನಗಳು ನಡೆದಿವೆ.

ವೆಬ್ ಯುದ್ಧದಲ್ಲಿ ತೊಡಗಿರುವ ದೇಶಗಳು ಆ ಮೂಲಕ ಪರಸ್ಪರರ ರಕ್ಷಣಾ ಶಸ್ತ್ರಾಸ್ತ್ರಗಳನ್ನು ಹಾಳುಗೆಡವಿದರೆ, ಅಣುಬಾಂಬುಗಳು ಸಿಡಿಯದಂತೆ ಮಾಡಿದರೆ ಒಂದು ರೀತಿಯಲ್ಲಿ ಒಳಿತೇ ಆಯಿತು ಎನ್ನಬಹುದೇನೋ. ಆದರೆ ವೆಬ್ ಯುದ್ಧದ ಪರಿಣಾಮ ಮನುಕುಲಕ್ಕೆ ಉಪಯುಕ್ತವಾದ ತಂತ್ರಜ್ಞಾನದ ಮೇಲೂ ಆದರೆ ಅದರ ಪರಿಣಾಮ ಭೀಕರವಾಗಬಹುದು.

ಸೈಬರ್ ಸಮರತಂತ್ರವನ್ನು ಹಲವು ದೇಶಗಳು ತಮ್ಮ ರಕ್ಷಣಾವ್ಯವಸ್ಥೆಯ ಅಂಗವಾಗಿಯೇ ಬೆಳೆಸುತ್ತಿವೆ ಎನ್ನಲಾಗಿದೆ. ಹೀಗಾಗಿಯೇ ಇದು ಇನ್ನಷ್ಟು ದೊಡ್ಡ ಸಮಸ್ಯೆಯಾಗಿ ಬೆಳೆಯುವ ಮೊದಲೇ ಇಂತಹ ದಾಳಿಗಳನ್ನು ತಡೆಯುವ ನಿಟ್ಟಿನಲ್ಲಿ ಅನೇಕ ಪ್ರಯತ್ನಗಳು ಸಾಗಿವೆ. ಹಲವು ಅಂತಾರಾಷ್ಟ್ರೀಯ ಸಂಘಟನೆಗಳು ಇಂತಹ ದಾಳಿಗಳನ್ನು ತಡೆಯುವತ್ತ ಕಾರ್ಯೋನ್ಮುಖವಾಗಿವೆ.

ಆ ಪ್ರಯತ್ನಗಳೆಲ್ಲ ಯಶಸ್ವಿಯಾಗಲಿ ಎಂದು ಹಾರೈಸುವುದರ ಜೊತೆಗೆ ನಾವು ಮಾಡಬೇಕಾದ ಇನ್ನೊಂದು ಕೆಲಸವೂ ಇದೆ. ಕಂಪ್ಯೂಟರ್ ಬಳಕೆಯಲ್ಲಿ ಎಚ್ಚರ ವಹಿಸುವುದು ಮತ್ತು ಆ ಮೂಲಕ ನಮ್ಮ ಸುರಕ್ಷತೆಯನ್ನು ಕಾಪಾಡಿಕೊಳ್ಳುವುದೇ ಆ ಕೆಲಸ. ವೈರಸ್ ವಿರೋಧಿ ತಂತ್ರಾಂಶಗಳ (ಆಂಟಿ ವೈರಸ್) ಬಳಕೆ, ಅಪರಿಚಿತ ಜಾಲತಾಣಗಳಿಂದ ತಂತ್ರಾಂಶಗಳನ್ನು ಡೌನ್‌ಲೋಡ್ ಮಾಡದಿರುವುದು, ಸಂಶಯಾಸ್ಪದ ಇಮೇಲ್‌ಗಳನ್ನು ತೆರೆಯದಿರುವುದು - ಅವುಗಳಿಗೆ ಉತ್ತರಿಸದಿರುವುದು, ಸಿಕ್ಕಸಿಕ್ಕ ಹೈಪರ್‌ಲಿಂಕ್‌ಗಳ ಮೇಲೆಲ್ಲ ಕ್ಲಿಕ್ ಮಾಡದಿರುವುದು ಮುಂತಾದ ಕೆಲ ಸರಳ ಕ್ರಮಗಳನ್ನು ಪಾಲಿಸುವುದರಿಂದ ನಮ್ಮ ಮಿತಿಯೊಳಗೆ ನಾವು ಸುರಕ್ಷಿತರಾಗಿ ಉಳಿಯುವುದು ಸಾಧ್ಯ.

(ಮಾಹಿತಿ: ಅಂತರಜಾಲದ ವಿವಿಧ ಮೂಲಗಳಿಂದ)