Saturday, 17 June 2017

ಇಂಟರ್ನೆಟ್ ನಲ್ಲೂ ಸುಳ್ಳು ಸುದ್ದಿಗಳು

ಇದು ಮಾಹಿತಿಯ ಯುಗ. ಎಲ್ಲ ಕಡೆಗಳಿಂದ ಎಲ್ಲ ಸಮಯದಲ್ಲೂ ನಮ್ಮತ್ತ ಮಾಹಿತಿಯ ಮಹಾಪೂರವೇ ಹರಿದು ಬರುತ್ತಿರುತ್ತದೆ.

ಒಂದು ನಿಮಿಷದ ಅವಧಿ ಬಹಳಷ್ಟು ಸಂದರ್ಭಗಳಲ್ಲಿ ನಮಗೆ ಕ್ಷುಲ್ಲಕವೆಂದು ತೋರುತ್ತದಲ್ಲ, ಇಷ್ಟೇ ಸಮಯ ಮಾಹಿತಿಯ ಲೋಕದಲ್ಲಿ ಅದೆಷ್ಟೋ ಚಟುವಟಿಕೆಗಳಿಗೆ ಸಾಕ್ಷಿಯಾಗಿರುತ್ತದೆ. ಫೇಸ್‌ಬುಕ್ ಗೋಡೆಯ ಮೇಲೆ ಒಂದು ನಿಮಿಷದ ಅವಧಿಯಲ್ಲಿ ಅದೆಷ್ಟೋ ಸಾವಿರ ಹೊಸ ಪೋಸ್ಟುಗಳು ಕಾಣಿಸಿಕೊಳ್ಳುತ್ತವೆ, ಹತ್ತಾರು ಲಕ್ಷ ಲೈಕುಗಳು ದಾಖಲಾಗುತ್ತವೆ. ಲಕ್ಷಗಟ್ಟಲೆ ಟ್ವೀಟುಗಳು, ವಾಟ್ಸ್‌ಆಪ್ ಸಂದೇಶಗಳು, ಇನ್ಸ್‌ಟಾಗ್ರಾಮಿನ ಚಿತ್ರಗಳು, ಯೂಟ್ಯೂಬ್ ವೀಡಿಯೋಗಳೆಲ್ಲ ಮಾಹಿತಿಯ ಈ ಮಹಾಪೂರಕ್ಕೆ ತಮ್ಮ ಕೊಡುಗೆ ಸಲ್ಲಿಸುತ್ತವೆ.

ಇಷ್ಟೆಲ್ಲ ಪ್ರಮಾಣದಲ್ಲಿ ಹರಿದುಬರುತ್ತದಲ್ಲ ಮಾಹಿತಿ, ಅದು ನಮ್ಮ ಬದುಕಿನಲ್ಲಿ ಗಮನಾರ್ಹ ಬದಲಾವಣೆಗಳನ್ನು ತಂದಿದೆ. ವಿಭಿನ್ನ ವಿಷಯಗಳನ್ನು ಕುರಿತ ಅರಿವು, ಹೊಸ ಒಳನೋಟಗಳನ್ನೆಲ್ಲ ಎಲ್ಲಿ ಯಾವಾಗ ಬೇಕಾದರೂ ಪಡೆದುಕೊಳ್ಳುವುದು ಸಾಧ್ಯವಾಗಿದೆ.

ಎಡೆಬಿಡದೆ ನಿರಂತರವಾಗಿ ಹರಿದುಬರುವ ಅಷ್ಟೂ ಮಾಹಿತಿ ಉಪಯುಕ್ತವಾದುದಾಗಿದ್ದರೆ ಹ್ಯಾಪಿ ಎಂಡಿಂಗ್ ಸಿನಿಮಾದಂತೆ ಒಳ್ಳೆಯದೇ ಆಯಿತು ಬಿಡಿ ಎನ್ನಬಹುದಿತ್ತು - ಜ್ಞಾನದ ಸಿರಿ ಎಷ್ಟಿದ್ದರೂ ಒಳ್ಳೆಯದೇ ತಾನೆ! ಆದರೆ ನೈಜ ಸ್ಥಿತಿ ಕೊಂಚ ಬೇರೆಯೇ:
ನಮ್ಮತ್ತ ಬರುವ ಮಾಹಿತಿಯ ಈ ಸಂಪತ್ತಿನಲ್ಲಿ ಖೋಟಾನೋಟುಗಳದು ಬಲುದೊಡ್ಡ ಹಾವಳಿ. 

ಹೌದು, ಫೇಸ್‌ಬುಕ್ - ವಾಟ್ಸ್‌ಆಪ್‌ಗಳಲ್ಲಿ ನಮಗೆ ಅದೆಷ್ಟೋ ಸುಳ್ಳುಗಳು ಕಾಣಸಿಗುತ್ತವೆ: ಕಂಪ್ಯೂಟರ್ ವೈರಸ್ಸುಗಳ ಬಗ್ಗೆ ಕಪೋಲಕಲ್ಪಿತ ಮಾಹಿತಿ, ನಮ್ಮ ರಾಷ್ಟ್ರಗೀತೆಗೆ ಯಾರೋ ಅವಾರ್ಡು ಕೊಟ್ಟರೆಂಬ ಹೆಮ್ಮೆ, ನಾಲ್ಕಾರು ದಿನ ಸೂರ್ಯನ ಬೆಳಕೇ ಇರುವುದಿಲ್ಲ ಎನ್ನುವ ಭಯೋತ್ಪಾದನೆ, ಅದೇನೇನೋ ಮಾಡಿದರೆ ಐಪ್ಯಾಡು ಉಚಿತವಾಗಿ ಸಿಗುತ್ತದೆ ಎನ್ನುವಂತಹ ಬೊಗಳೆ - ಇನ್ನೂ ಏನೇನೋ. ಆರೋಗ್ಯ ಮತ್ತು ಔಷಧಗಳಿಗೆ ಸಂಬಂಧಪಟ್ಟ ಸುಳ್ಳು ಇಲ್ಲವೇ ತಪ್ಪು ಮಾಹಿತಿಗಳೂ ದಂಡಿಯಾಗಿ ಸಿಗುತ್ತವೆ. ಏನೇನೋ ಸುಳ್ಳುಹೇಳಿ ವಂಚಿಸಲು ಪ್ರಯತ್ನಿಸುವವರೂ ಇಲ್ಲದಿಲ್ಲ.

ಜಾಲಲೋಕದಲ್ಲಿ ಕಂಡ ಮಾಹಿತಿಯನ್ನೆಲ್ಲ ಎಲ್ಲರಿಗೂ ಹಂಚಿಬಿಡುವ ಹವ್ಯಾಸ ನಮ್ಮಲ್ಲಿ ಅನೇಕರಿಗೆ ಇರುತ್ತದಲ್ಲ, ಅಂಥವರ ಮೂಲಕ ಈ ಸುಳ್ಳುಗಳೆಲ್ಲ ಹರಡುತ್ತಲೇ ಹೋಗುತ್ತದೆ. ಫೇಸ್‌ಬುಕ್‌ನಲ್ಲಿ ಶೇರ್ ಆಗುತ್ತವೆ, ವಾಟ್ಸ್‌ಆಪ್‌ನಲ್ಲಿ ಫಾರ್‌ವರ್ಡಿಸಲ್ಪಡುತ್ತವೆ.

ಆದರೆ ಜಾಲಲೋಕದ ಈ ಜೊಳ್ಳನ್ನು ನಂಬುವುದು ಮತ್ತು ಇತರರೊಡನೆ ಹಂಚಿಕೊಳ್ಳುವುದು - ಎರಡೂ ಶುದ್ಧ ತಪ್ಪು. ಅದರಿಂದಾಗಿ ಸಮಯ ಹಾಳಾಗುವುದು ಅಥವಾ ಆಪ್ತರಿಂದ ಬೈಸಿಕೊಳ್ಳುವ ಪ್ರಸಂಗ ಸೃಷ್ಟಿಯಾಗುವುದಷ್ಟೇ ಅಲ್ಲ, ಆರೋಗ್ಯಕ್ಕೆ ಸಂಬಂಧಿಸಿದಂತೆ ಸಿಕ್ಕಸಿಕ್ಕ ಸಲಹೆಯನ್ನೆಲ್ಲ ಪಾಲಿಸಹೋಗುವುದು ಹಾನಿಕಾರಕವೂ ಆಗಬಹುದು. ವಂಚಕರ ಬಲೆಗೆ ಬಿದ್ದರೆ ಕಿಸೆಗೂ ಕತ್ತರಿ ಗ್ಯಾರಂಟಿ!

ಹಾಗಾದರೆ ಹಂಚಲು ಹೊರಡುವ ಮೊದಲು ನಮಗೆ ಸಿಕ್ಕಿರುವ ಮಾಹಿತಿ ನಿಜವೋ ಸುಳ್ಳೋ ಎಂದು ಪತ್ತೆಹಚ್ಚುವುದು ಒಳ್ಳೆಯದು ಎಂದಾಯಿತು. ಆದರೆ ಈ ಕೆಲಸ ಮಾಡುವುದು ಹೇಗೆ?

ಯಾವುದೋ ರೋಗದಿಂದ ನರಳುತ್ತಿರುವ ನತದೃಷ್ಟ ಮಗುವಿನ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ನಿಮ್ಮ ಮಿತ್ರರು ಶೇರ್ ಮಾಡಿದ್ದಾರೆ ಎಂದುಕೊಳ್ಳೋಣ. ಈ ಚಿತ್ರವನ್ನು ಶೇರ್ ಮಾಡಿದಾಗಲೆಲ್ಲ ಆ ಮಗುವಿಗೆ ಒಂದು ಡಾಲರ್ ಸಿಗುತ್ತದೆ ಎನ್ನುವುದು ಅದರ ಜೊತೆಗಿರುವ ಸಂದೇಶ. ಇಂಥದ್ದನ್ನೆಲ್ಲ ಸುಮ್ಮನೆ ಹಂಚಿಕೊಳ್ಳುವ ಮೊದಲು ಹಾಗೆಲ್ಲಾದರೂ ಆಗುವುದು ಸಾಧ್ಯವೇ ಎಂದು ನಾವು ಯೋಚಿಸಬೇಕಾಗುತ್ತದೆ. ಇಂತಹ ಫೋಟೋಗಳನ್ನು ಎಷ್ಟು ಬಾರಿ ಶೇರ್ ಮಾಡಲಾಗುತ್ತದೆ ಎಂದು ಯಾರು - ಹೇಗೆ ಲೆಕ್ಕ ಇಡುತ್ತಾರೆ, ಅದಕ್ಕೆಲ್ಲ ಕೊಡಲು ದುಡ್ಡು ಎಲ್ಲಿಂದ ತರುತ್ತಾರೆ ಎಂದು ನಮ್ಮನ್ನೇ ಪ್ರಶ್ನಿಸಿಕೊಂಡರೂ ತಪ್ಪಿಲ್ಲ. 

ಯಾವುದೋ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿದರೆ ಒಂದು ಐಫೋನ್ ಉಚಿತವಾಗಿ ಸಿಗುತ್ತದೆ ಎಂದು ಬೊಗಳೆಬಿಡುವವರೂ ಅನೇಕರಿದ್ದಾರೆ. ಸುಮ್ಮನೆ ಲೈಕ್ ಮಾಡಿದವರಿಗೆಲ್ಲ ಒಂದೊಂದು ಐಫೋನ್ ಕೊಡಲು ಯಾರಿಗೆ ಸಾಧ್ಯ? ಹಾಗೊಮ್ಮೆ ಸಾಧ್ಯವಿದ್ದರೂ ಅವರು ಯಾಕೆ ಅಂತಹ ಪೆದ್ದುಕೆಲಸ ಮಾಡುತ್ತಾರೆ? ಎಂದೆಲ್ಲ ಯೋಚಿಸುತ್ತಿದ್ದಂತೆ ಈ ಹೇಳಿಕೆಯ ಬಂಡವಾಳವೆಲ್ಲ ಬಯಲಾಗಿಬಿಡುತ್ತದೆ. ಇದರ ಬದಲಿಗೆ ಹಿಂದೆಮುಂದೆ ಯೋಚಿಸದೆ ಲೈಕ್ ಒತ್ತಿದರೆ, ಆ ಪುಟವನ್ನು ಮಿತ್ರರೆಲ್ಲರ ಜೊತೆಗೆ ಹಂಚಿಕೊಂಡರೆ? ಎಷ್ಟು ಸಮಯ ಹಾಗೂ ಸಂಪನ್ಮೂಲ ವ್ಯರ್ಥ ಅಲ್ಲವೆ? ಪುಟಕ್ಕೆ ಪುಗಸಟ್ಟೆ ಲೈಕ್ ಗಿಟ್ಟಿಸಿ ತನ್ನ ಬೇಳೆ ಬೇಯಿಸಿಕೊಳ್ಳಲು ಹೊರಟವನಿಗೆ ವಿನಾಕಾರಣ ಬೆಂಬಲ ನೀಡಿದ ಪಾಪವೂ ನಿಮಗೇ. 

ಯಾವುದೋ ಚಿತ್ರಕ್ಕೆ ಕಮೆಂಟ್ ಮಾಡಿ, ಮ್ಯಾಜಿಕ್ ನೋಡಿ ಎನ್ನುವವರೂ ಹೀಗೆ ಲೈಕುಗಳನ್ನು ಸಂಪಾದಿಸುವ ಹಪಹಪಿಯಲ್ಲೇ ಇರುತ್ತಾರೆ. ಅಂಥದ್ದಕ್ಕೆಲ್ಲ ಪ್ರತಿಕ್ರಿಯೆ ನೀಡುವ ಮೂಲಕ ನಾವು ಮಾತ್ರ ಹಳ್ಳಕ್ಕೆ ಬೀಳುವುದಿಲ್ಲ, ನಾನು ಇದೊಂದು ಲೈಕ್ ಮಾಡಿದ್ದೇನೆ ನೋಡಿ ಎಂದು ನ್ಯೂಸ್‌ ಫೀಡಿನಲ್ಲಿ ಪ್ರಚಾರ ಕೊಟ್ಟು ಅವರನ್ನೂ ಹಳ್ಳಕ್ಕೆ ತಳ್ಳಲು ಪ್ರಯತ್ನಿಸುತ್ತೇವೆ!   

ತಂತ್ರಜ್ಞಾನದ ಹೆಸರಿನಲ್ಲಿ ನಮಗೆ ಕತೆಹೇಳುವವರನ್ನು ಕಣ್ಣುಮುಚ್ಚಿ ನಂಬುವ ಅಗತ್ಯವೂ ಇಲ್ಲ. "ಕಳ್ಳರು ಬಲವಂತವಾಗಿ ಎಟಿಎಂಗೆ ಕರೆದೊಯ್ದರೆ ನಿಮ್ಮ ಪಿನ್ ಅನ್ನು ತಿರುಗುಮುರುಗಾಗಿ ಒತ್ತಿ, ಅದು ಪೊಲೀಸರಿಗೆ ಮಾಹಿತಿ ತಲುಪಿಸುತ್ತದೆ" ಎಂದು ಹೇಳುವವರನ್ನು ನೀವೂ ಕೇಳಿ: ನನ್ನ ಪಿನ್ ೧೦೦೧ ಆಗಿದ್ದರೆ ಅದನ್ನು ತಿರುಗುಮುರುಗಾಗಿ ಒತ್ತುವುದು ಹೇಗೆ? ಎಟಿಎಂನಿಂದ ದುಡ್ಡು ಸಿಕ್ಕ ಮೇಲೂ ಪೊಲೀಸರು ತಲುಪುವ ತನಕ ಕಳ್ಳರು ಅಲ್ಲೇ ಇರುತ್ತಾರೆ ಎನ್ನಲು ಏನು ಗ್ಯಾರಂಟಿ?? (ಅಂದಹಾಗೆ ಇಂತಹುದೊಂದು ತಂತ್ರಜ್ಞಾನವನ್ನು ಅಳವಡಿಸುವುದು ಸೈದ್ಧಾಂತಿಕವಾಗಿ ಸಾಧ್ಯವಿದ್ದರೂ ಮೇಲೆ ಕೇಳಿದಂತಹ ಪ್ರಶ್ನೆಗಳು ಇನ್ನೂ ಪ್ರಸ್ತುತವಾಗಿರುವುದರಿಂದ ಅದನ್ನು ಪ್ರಾಯೋಗಿಕವಾಗಿ ಬಳಸಲಾಗುತ್ತಿಲ್ಲ)

ಇದೆಲ್ಲ ನೇರಾನೇರ ಖೊಟ್ಟಿ ವಿಷಯಗಳ ಮಾತಾಯಿತು. ಆದರೆ ನಮ್ಮ ಕಣ್ಣಿಗೆ ಬೀಳುವ ಕೆಲ ಸಂದೇಶಗಳ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಲು ಅಗತ್ಯವಾದ ಮಾಹಿತಿ ನಮ್ಮಲ್ಲಿ ಇಲ್ಲದಿರುವ ಸಾಧ್ಯತೆಯೂ ಇದೆ. ನಾವು ದಿನನಿತ್ಯ ಬಳಸುವ ಯಾವುದೋ ವಸ್ತು ಭಯಂಕರ ಕಾಯಿಲೆಗೆ ರಾಮಬಾಣ ಅಂತಲೋ ಅದಾವುದೋ ಗುಡ್ಡದ ಮೇಲೆ ಬಿಟ್ಟಿರುವ ಹೂವು ಬೆತ್ತಲೆ ಹೆಣ್ಣಿನಂತೆ ಕಾಣುತ್ತದೆ ಅಂತಲೋ ಹೇಳುವ ಸಂದೇಶ ಕಣ್ಣಿಗೆ ಬಿತ್ತು ಎಂದುಕೊಳ್ಳಿ. ಅದರಲ್ಲಿರುವ ವಿಷಯ ನಿಜವೋ ಸುಳ್ಳೋ ಎನ್ನುವುದು ತಕ್ಷಣಕ್ಕೆ ಗೊತ್ತಾಗದಿದ್ದರೆ ನಾವು ಗೂಗಲ್ ಮೊರೆಹೋಗಬಹುದು, ಇಲ್ಲವೇ ಇಂತಹ ಸಂದೇಶಗಳನ್ನು ವಿಶ್ಲೇಷಿಸಿ ಅವು ಸುಳ್ಳೋ ನಿಜವೋ ಎಂದು ತಿಳಿಸುವ ಜಾಲತಾಣಗಳಿಗೂ ಭೇಟಿಕೊಡಬಹುದು.

snopes.com, hoax-slayer.com ಮೊದಲಾದವು ಈ ಬಗೆಯ ಜಾಲತಾಣಗಳಿಗೆ ಉದಾಹರಣೆಗಳು. ಎಲ್ಲೋ ಪ್ರಾರಂಭವಾಗಿ ಫಾರ್‌ವರ್ಡ್ ಆಗುತ್ತ ಆಗುತ್ತ ನಮ್ಮವರೆಗೂ ಬಂದು ತಲುಪುವ ಸಂದೇಶಗಳಲ್ಲಿ ನಿಜ ಎಷ್ಟಿದೆ ಹಾಗೂ ಸುಳ್ಳು ಎಷ್ಟಿದೆ ಎನ್ನುವ ವಿಷಯ ಸಾಮಾನ್ಯವಾಗಿ ಈ ತಾಣಗಳಲ್ಲಿ ಸಿಕ್ಕಿಬಿಡುತ್ತದೆ. 

ಕೆಲವೊಮ್ಮೆ ನಕಲಿ ಫೋಟೋಗಳು ಕೂಡ ಇಮೇಲ್, ಫೇಸ್‌ಬುಕ್, ವಾಟ್ಸ್‌ಆಪ್‌ಗಳ ಮೂಲಕ ಹರಿದಾಡುವುದುಂಟು. ಈ ಚಿತ್ರಗಳು ಫೋಟೋಶಾಪ್ ಸೃಷ್ಟಿಯಾಗಿದ್ದರೂ ಕೂಡ ಸುಳ್ಳು ಮಾಹಿತಿಯ ಕತೆ ಹೆಣೆದು ಅವು ನೈಜ ಚಿತ್ರಗಳೇ ಎನ್ನುವಂತೆ ಬಿಂಬಿಸಲು ಪ್ರಯತ್ನಿಸಲಾಗಿರುತ್ತದೆ.

ಇಂತಹ ಯಾವುದೇ ಚಿತ್ರವನ್ನು ನೋಡಿದಾಕ್ಷಣ ಅದು ಅಸಹಜವಾಗಿದೆ ಎನ್ನಿಸಿದರೆ ಅದರ ಸತ್ಯಾಸತ್ಯತೆಯನ್ನೂ ತಿಳಿದುಕೊಳ್ಳಬಹುದು. ಗೂಗಲ್‌ನ 'ಸರ್ಚ್ ಬೈ ಇಮೇಜಸ್' ಆಯ್ಕೆಯಲ್ಲಿ (images.google.com) ಅಂತಹ ಚಿತ್ರವನ್ನು ಅಪ್‌ಲೋಡ್ ಮಾಡಿದರೆ ಅದು ಯಾವೆಲ್ಲ ಜಾಲತಾಣಗಳಲ್ಲಿ ಪ್ರಕಟವಾಗಿದೆ ಎಂದು ನೋಡಬಹುದು; ಅಷ್ಟೇ ಅಲ್ಲ, ಆ ಚಿತ್ರಗಳ ಜೊತೆಗೆ ಕಾಣಿಸಿಕೊಳ್ಳುವ ಲೇಖನಗಳನ್ನು ಗಮನಿಸಿದರೆ ಚಿತ್ರದ ಮೂಲದ ಬಗೆಗೂ ಸುಮಾರಾಗಿ ತಿಳಿದುಕೊಳ್ಳಬಹುದು.

ಇಂತಹ ಸಂದೇಶಗಳ ಬಗ್ಗೆ ಮಾತನಾಡುವಾಗ ನಮಗೆ ಎದುರಾಗುವ ಇನ್ನೊಂದು ಪ್ರಶ್ನೆ - ಇದನ್ನೆಲ್ಲ ಯಾರು ಮತ್ತು ಏಕೆ ಸೃಷ್ಟಿಸುತ್ತಾರೆ?

ಯಾವುದೋ ಕೃತ್ರಿಮ ಸಂದೇಶ ನಮ್ಮನ್ನು ವಂಚಿಸಿ ಹಣಕೀಳಲು ಪ್ರಯತ್ನಿಸುತ್ತಿದ್ದರೆ ಅದನ್ನು ತಯಾರಿಸಿದವರ ಉದ್ದೇಶ ಸ್ಪಷ್ಟ: ಅವರು ತೋಡಿದ ಹಳ್ಳಕ್ಕೆ ನಾವು ಬಿದ್ದರೆ ಅವರಿಗೆ ಲಾಭ. ಆದರೆ ಸುಳ್ಳು ಮಾಹಿತಿಯನ್ನು ಹರಡುವವರ ಉದ್ದೇಶ ಏನಿರುತ್ತದೆ? ಇಲ್ಲದ ವೈರಸ್ಸಿನ ಹೆಸರಿನಲ್ಲಿ ನಮ್ಮನ್ನು ಹೆದರಿಸಿದರೆ, ಸೂರ್ಯ ಮರೆಯಾಗುತ್ತಾನೆಂದು ಭಯಹುಟ್ಟಿಸಿದರೆ ಅವರಿಗೇನು ಲಾಭ?

ಈ ಪ್ರಶ್ನೆಗೆ ಉತ್ತರಿಸುವುದು ಕೊಂಚ ಕಷ್ಟವೇ. ಕೆಲವೊಮ್ಮೆ ಇಂತಹ ಸಂದೇಶಗಳನ್ನು ಕುಚೇಷ್ಟೆಗೆಂದು ಉದ್ದೇಶಪೂರ್ವಕವಾಗಿಯೇ ಸೃಷ್ಟಿಸಲಾಗಿರುತ್ತದೆ. ಸ್ನೇಹಿತರ ಬಳಗವನ್ನು ಏಮಾರಿಸುವ ಉದ್ದೇಶದಿಂದ ತಯಾರಾದ ಸಂದೇಶಗಳು ಮೂಲ ಸೃಷ್ಟಿಕರ್ತನ ನಿಯಂತ್ರಣ ಮೀರಿ ಹೊರಪ್ರಪಂಚವನ್ನು ತಲುಪುವುದೂ ಉಂಟು. ಯಾವುದೋ ಮಾಹಿತಿಯನ್ನು ತಪ್ಪಾಗಿ ಅರ್ಥೈಸಿಕೊಂಡು (ಉದಾ: ಹಾಸ್ಯವನ್ನು ನಿಜವೆಂದು ತಿಳಿದು) ಈ ಬಗೆಯ ಸಂದೇಶಗಳನ್ನು ಬರೆದಿರುವುದೂ ಸಾಧ್ಯ. ಇನ್ನು ಕೆಲ ಸನ್ನಿವೇಶಗಳಲ್ಲಿ ಯಾವುದೋ ವ್ಯಕ್ತಿ, ಸಂಸ್ಥೆ  ಅಥವಾ ಸಮುದಾಯದ ಬಗ್ಗೆ ಅಪಪ್ರಚಾರ ಮಾಡಲು - ದ್ವೇಷ ಸಾಧಿಸಲು ಕೂಡ ಸುಳ್ಳು ಮಾಹಿತಿಯನ್ನು ಸೃಷ್ಟಿಸಲಾಗಿರುತ್ತದೆ. ಕೆಲವು ಸುಳ್ಳುಗಳ ಹಿಂದೆ ಸಮಾಜದ ಶಾಂತಿ ಕದಡುವ, ಅಸ್ಥಿರತೆ ಸೃಷ್ಟಿಸುವ ಉದ್ದೇಶಗಳೂ ಇರಬಹುದು.  

ಈ ಪಿಡುಗನ್ನು ನಿವಾರಿಸುವುದು ಹೇಗೆ? ಈ ಪ್ರಶ್ನೆಗೆ ಸುಲಭವಾಗಿಯೇ ಉತ್ತರಿಸಬಹುದು. ಏಕೆಂದರೆ ಇಂತಹ ಸುಳ್ಳುಗಳೆಲ್ಲ ಜೀವಂತವಾಗಿರುವುದು ಅವನ್ನು ಹಂಚುವವರು ಇರುವವರೆಗೆ ಮಾತ್ರ. ಯಾವಾಗ ನಾವು ಸಿಕ್ಕಸಿಕ್ಕ ಮಾಹಿತಿಯನ್ನೆಲ್ಲ ಹಿಂದೆಮುಂದೆ ಯೋಚಿಸದೆ ಫಾರ್‌ವರ್ಡ್ ಮಾಡುವುದನ್ನು, ಶೇರ್ ಮಾಡುವುದನ್ನು ನಿಲ್ಲಿಸುತ್ತೇವೆಯೋ ಆಗ ಈ ಸುಳ್ಳುಗಳ ಹರಡುವಿಕೆಯೂ ನಿಂತುಹೋಗುತ್ತದೆ; ಸಮಯ - ಹಣ - ಸಂಪನ್ಮೂಲಗಳ ಅಪವ್ಯಯವೂ ತಪ್ಪುತ್ತದೆ. ಹಾಗಾಗಿ, ಸಿಕ್ಕಿದ್ದನ್ನೆಲ್ಲ ಶೇರ್ ಮಾಡುವ ಮೊದಲು, ಖಂಡಿತಾ, ಒಮ್ಮೆ ಯೋಚಿಸಿ. ಹಾಗೆಯೇ ನಿಮ್ಮ ಪರಿಚಿತರಲ್ಲಿ ಯಾರಾದರೂ ಶೇರ್ ವೀರರಿದ್ದರೆ ಅವರಿಗೂ ಒಮ್ಮೆ ತಿಳಿಹೇಳಿ!



>ನಿಮಿಷವೊಂದಕ್ಕೆ ಫೇಸ್‌ಬುಕ್‌ನಲ್ಲಿ ದಾಖಲಾಗುವ ಲೈಕುಗಳ ಸಂಖ್ಯೆ (೨೦೧೫ರ ಆಗಸ್ಟ್‌ನಲ್ಲಿದ್ದಂತೆ) ನಲವತ್ತೊಂದು ಲಕ್ಷಕ್ಕೂ ಹೆಚ್ಚು. ಅಷ್ಟೇ ಸಮಯದಲ್ಲಿ ಟ್ವಿಟ್ಟರಿನಲ್ಲಿ ಮೂರೂವರೆಲಕ್ಷದಷ್ಟು ಟ್ವೀಟುಗಳು ಹಾರುತ್ತವೆ, ಮುನ್ನೂರು ಗಂಟೆಗಳಷ್ಟು ಅವಧಿಯ ವೀಡಿಯೋ ಯೂಟ್ಯೂಬ್‌ ಸೇರುತ್ತದೆ.

 >ಎಸ್ಸೆಮ್ಮೆಸ್ ಅಥವಾ ವಾಟ್ಸ್‌ಆಪ್ ಮೆಸೇಜನ್ನು ಒಂದಷ್ಟು ಜನಕ್ಕೆ ಕಳುಹಿಸಿದರೆ ಉಚಿತ ಟಾಕ್‌ಟೈಮ್ ಸಿಗುತ್ತದೆ ಎನ್ನುತ್ತಾರಲ್ಲ, ನಮ್ಮ ಮೊಬೈಲ್ ಪ್ರೀಪೇಯ್ಡೋ ಪೋಸ್ಟ್ ಪೇಯ್ಡೋ ಎನ್ನುವುದು ಅವರಿಗೆ ಹೇಗೆ ಗೊತ್ತಾಗುತ್ತದೆ? ವಾಟ್ಸ್‌ಆಪ್ ಮೆಸೇಜು ಕಳುಹಿಸಿದ ಮಾತ್ರಕ್ಕೆ ಮೊಬೈಲಿನ ಬ್ಯಾಟರಿ ಚಾರ್ಜ್ ಆಗುವಂತಿದ್ದರೆ ಇಷ್ಟೆಲ್ಲ ಚಾರ್ಜರುಗಳು - ಪವರ್‌ಬ್ಯಾಂಕುಗಳು ಇರುವುದಾದರೂ ಏಕೆ?? ಇಂತಹ ಪ್ರಶ್ನೆಗಳನ್ನೆಲ್ಲ ನಮ್ಮನ್ನು ನಾವೇ ಕೇಳಿಕೊಂಡರೆ ಸುಳ್ಳು ಮಾಹಿತಿಯ ಸಮಸ್ಯೆ ಅದೆಷ್ಟೋ ಕಡಿಮೆಯಾಗುತ್ತದೆ. ದುರುದ್ದೇಶಪೂರಿತ ‌ಪೇಜ್‌ಗಳನ್ನು ಸೃಷ್ಟಿಸುವುದು, ಸುಳ್ಳುಹೇಳಿ ಸಾವಿರಗಟ್ಟಲೆ ಲೈಕ್ ಸಂಪಾದಿಸುವುದು ಹಾಗೂ ಆ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ತಮ್ಮ ಗೋಲ್‌ಮಾಲ್ ಮುಂದುವರೆಸುವುದು ಫೇಸ್‌ಬುಕ್‌ನಲ್ಲಿ ಇದೀಗ ಬಲುದೊಡ್ಡ ದಂಧೆ - 'ಲೈಕ್ ಫಾರ್ಮಿಂಗ್' ಎನ್ನುವುದು ಇದರ ಹೆಸರು.ನಿಮ್ಮ ಹೆಸರಿನ ಅರ್ಥ, ಫೋಟೋ ವಿಶ್ಲೇಷಣೆ, ಪ್ರೊಫೈಲ್ ವೀಕ್ಷಿಸಿದವರ ವಿವರ, ನಿಮ್ಮನ್ನು ಪ್ರೀತಿಸುತ್ತಿರುವವರ ಹೆಸರನ್ನೆಲ್ಲ ಹೇಳುವುದಾಗಿ ಜಂಬಕೊಚ್ಚುವ ಫೇಸ್‌ಬುಕ್ ಆಪ್‌ಗಳನ್ನು ನೀವು ನೋಡಿರಬಹುದು; ಅವನ್ನು ಉಪಯೋಗಿಸಿ ತಲೆಬುಡವಿಲ್ಲದ ಫಲಿತಾಂಶಗಳನ್ನೂ ಪಡೆದಿರಬಹುದು. ಇಂತಹ ಆಪ್‌ಗಳ ಉಪಯೋಗ ಏನು, ಅವನ್ನು ಯಾರು ಏಕೆ ಸೃಷ್ಟಿಸುತ್ತಾರೆ ಎಂದು ಯೋಚಿಸಿಲ್ಲದಿದ್ದರೆ ಮುಂದಿನ ಬಾರಿ ಖಂಡಿತಾ ಯೋಚಿಸಿ. ಏಕೆಂದರೆ ಇಂತಹ ಬಹಳಷ್ಟು ಆಪ್‌ಗಳು ನಿಮ್ಮ ಖಾಸಗಿ ಮಾಹಿತಿಯನ್ನು ಕದಿಯಲು ಪ್ರಯತ್ನಿಸುತ್ತಿರುತ್ತವೆ, ನಿಮ್ಮ ಮಿತ್ರರಿಗೆಲ್ಲ ಸಂದೇಶ ಕಳುಹಿಸಿ ಅವರಿಗೂ ಗಾಳಹಾಕಲು ಪ್ರಯತ್ನಿಸುತ್ತವೆ!ಜಾಲಲೋಕದಲ್ಲಿ ಹರಿದಾಡುವ ಸುಳ್ಳು ಇಲ್ಲವೇ ತಪ್ಪು ಮಾಹಿತಿಯ ಕೆಲ ಉದಾಹರಣೆಗಳನ್ನು ಪ್ರತಿವಾರವೂ ಪ್ರಕಟಿಸುತ್ತಿದ್ದ ವಾಷಿಂಗ್ಟನ್ ಪೋಸ್ಟ್ ಪತ್ರಿಕೆ ಇತ್ತೀಚೆಗೆ ಆ ಅಂಕಣವನ್ನು ನಿಲ್ಲಿಸಿತು. ಮೊದಲಿಗೆ ತಮಾಷೆಯಾಗಿಯೋ ಹಾಸ್ಯಾಸ್ಪದವಾಗಿಯೋ ಮಾತ್ರವೇ ತೋರುತ್ತಿದ್ದ ಸುಳ್ಳು ಮಾಹಿತಿ ಇದೀಗ ಹಣಸಂಪಾದನೆ ಹಾಗೂ ದ್ವೇಷಸಾಧನೆಯ ಮಾರ್ಗವಾಗಿಯೂ ಬಳಕೆಯಾಗುತ್ತಿರುವ ಬಗ್ಗೆ ಕೊನೆಯ ಅಂಕಣದಲ್ಲಿ ಹಂಚಿಕೊಂಡಿರುವ ವಿವರಗಳು (https://goo.gl/KpAMBW) ನಿಜಕ್ಕೂ ಚಿಂತನೆಗೆ ಹಚ್ಚುವಂತಿವೆ.

No comments:

Post a Comment