ಗ್ಯಾಜೆಟ್ ಲೋಕ ದಿಂದ
ಬೆಂಗಳೂರಿನಿಂದ ಕೇವಲ ೫ ಕಿ.ಮೀ. ಹೊರಗಡೆ ಹೋದರೆ ಸಾಕು ಮೊಬೈಲ್, ಅಂತರಜಾಲ, ೩ಜಿ, ಎಲ್ಲ ಸಿಗ್ನಲ್‌ಗಳೂ ಅಂಬೆಗಾಲಿಡುತ್ತವೆ. ಇಂತಹ ಸಂದರ್ಭಗಳಲ್ಲಿ ೩ಜಿ ಡಾಟಾಕಾರ್ಡ್ ಜೊತೆ ಗುದ್ದಾಡಿ ಅದಕ್ಕೊಂದು ಸಿಗ್ನಲ್ ಬೂಸ್ಟರ್ ಅನ್ನು ಮನೆಯಲ್ಲೆ ತಯಾರಿಸಿ ಬಳಸಿದರೆ ಹೇಗೆ?
ಅಂತರಜಾಲಕ್ಕೆ ಮಾಹಿತಿಹೆದ್ದಾರಿ (information superhighway) ಎಂಬ ಹೆಸರಿದೆ. ಈ ಹೆಸರು ಬೆಂಗಳೂರಿನಂತಹ ಮಾಹಾನಗರಕ್ಕೆ ಮಾತ್ರ ಅನ್ವಯ. ಬೆಂಗಳೂರಿನಿಂದ ಹೊರಗೆ ಕಾಲಿಟ್ಟೊಡನೆ ಅದು ಮಾಹಿತಿಯ ಕಾಲುದಾರಿ ಆಗುತ್ತದೆ. ಬೆಂಗಳೂರಿನ ಹೊರವರ್ತುಲ ರಸ್ತೆಯಿಂದ ಕೇವಲ ಒಂದೂವರೆ ಕಿ.ಮೀ. ದೂರದಲ್ಲಿರುವ ಶ್ರೀಗಂಧದ ಕಾವಲು ಎನ್ನುವ ಬಡಾವಣೆಗೆ ಮೂರು ವಾರಗಳ ಹಿಂದೆ ಮನೆ ಬದಲಾಯಿಸಿದೆ. ಇಲ್ಲಿ ಬಿಎಸ್‌ಎನ್‌ಎಲ್‌ನವರ ಸ್ಥಿರವಾಣಿ ಸಂಪರ್ಕ ಇಲ್ಲ. ಮೊಬೈಲ್ ಸಿಗ್ನಲ್ ಬೇಕಿದ್ದರೆ ಮನೆಯಿಂದ ಹೊರಗೆ ಹೋಗಬೇಕು. ೩ಜಿ ಡಾಟಾಕಾರ್ಡ್‌ಗೂ ಅದೇ ಗತಿ. ಮನೆಯೊಳಗೆ ಅದು ಕೇವಲ ೧ಜಿ ಅರ್ಥಾತ್ ಜಿಪಿಆರ್‌ಎಸ್ ವೇಗದಲ್ಲಿ ಕೆಲಸ (?) ಮಾಡುತ್ತದೆ. ಈ ವೇಗದಲ್ಲಿ ಸರಿಯಾಗಿ ಇಮೈಲ್ ಕೂಡ ಬರುವುದಿಲ್ಲ. ಬಿಎಸ್‌ಎನ್‌ಎಲ್ ಕಚೇರಿಗೆ ಹೋಗಿ ಇಂಜಿನಿಯರ್ ಅವರನ್ನು ಕಂಡು ಬಂದೆ. ನಿಮ್ಮ ಊರಿಗೆ ಸಂಪರ್ಕ ನಿಡಲು ಕೇಬಲ್ ಇಲ್ಲ. ಮೇಲಿನವರು ಕೇಬಲ್ ನೀಡಿದರೆ ಸಂಪರ್ಕ ನೀಡುತ್ತೇವೆ ಎಂಬ ವಾಗ್ದಾನ ಮಾತ್ರ ನೀಡಿ ಕಳುಹಿಸಿದರು (ದಾನಗಳಲ್ಲಿ ಅತಿ ಸುಲಭ ದಾನ -ವಾಗ್ದಾನ!). ಈಗ ಸದ್ಯಕ್ಕಂತೂ ಸ್ಥಿರವಾಣಿ ಇಲ್ಲ, ಆದುದರಿಂದ ಬ್ರಾಡ್‌ಬ್ಯಾಂಡೂ ಇಲ್ಲ. ಬಿಎಸ್‌ಎನ್‌ಎಲ್‌ನವರ ೩ಜಿ ಡಾಟಾಕಾರ್ಡ್ ಮೂಲಕ ಅಂತರಜಾಲ ಸಂಪರ್ಕ ಮಾಡೋಣವೆಂದರೆ ಅದು ಮನೆಯೊಳಗೆ ಕೇವಲ ೧ಜಿ, ಕಿಟಿಕಿಯಲ್ಲಿ ಇಟ್ಟಾಗ ಮಾತ್ರ ೩ಜಿ. ಬಿಎಸ್‌ಎನ್‌ಎಲ್‌ನ ಮೇಲಧಿಕಾರಿಗಳು ಬಹುಶಃ ಬಿಎಸ್‌ಎನ್‌ಎಲ್‌ನ ಹೆಸರು ಕೆಡಿಸಿ ಕೊನೆಗೆ ವಿಎಸ್‌ಎನ್‌ಎಲ್ ಅನ್ನು ಟಾಟಾದವರಿಗೆ ಮಾರಿದಂತೆ ಇದನ್ನೂ ಖಾಸಗಿಯವರಿಗೆ ಮಾರಿ ಕೈತೊಳೆದುಕೊಳ್ಳಲು ಕಿತಾಪತಿ ನಡೆಸುತ್ತಿರುವಂತೆ ನನಗೇನೋ ಅನುಮಾನ ಬರುತ್ತಿದೆ.
ರಿಲಯನ್ಸ್ ನೆಟ್‌ಕನೆಕ್ಟ್ ಮತ್ತು ಟಾಟಾ ಫೋಟೋನ್ ಮ್ಯಾಕ್ಸ್‌ಗಳನ್ನು ಕೂಡ ಬಳಸಿ ನೋಡಿದೆ. ಅವೆರಡರಲ್ಲಿ ಟಾಟಾ ಫೋಟೋನ್ ಮ್ಯಾಕ್ಸ್ ಮಾತ್ರ ಮನೆಯ ಯಾವ ಮೂಲೆಗೆ ಹೋದರೂ ಒಂದೇ ವೇಗವನ್ನು ನೀಡಿತು. ಟಾಟಾ ಫೋಟೋನ್ ಮ್ಯಾಕ್ಸ್ ಬಗ್ಗೆ ಎರಡು ವಾರ ಹಿಂದೆ ಗ್ಯಾಜೆಟ್ ಲೋಕ ಅಂಕಣದಲ್ಲಿ ಬರೆಯಲಾಗಿತ್ತು.
ಅಂತರಜಾಲ ಸಂಪರ್ಕ ಇಲ್ಲದಿದ್ದರೆ ನನ್ನಂತಹ ಜಾಲಿಗ ಬದುಕುವುದು ಹೇಗೆ? ನಾಗೇಶ ಹೆಗಡೆಯವರು ಒಂದು ಕಡೆ ಬರೆದುಕೊಂಡಂತೆ ಅಂತರಜಾಲ ಬಟ್ಟು ಜೀವಜಾಲದ ಕಡೆ ಗಮನ ಹರಿಸಲೇ? ಆದರೆ ನನಗೂ ಜೀವಶಾಸ್ತ್ರಕ್ಕೂ ಮೊದಲಿನಿಂದಲೇ ಎಣ್ಣೆ-ಸೀಗೆ ಸಂಬಂಧ. ಈ ಮಾಹಿತಿಯ ಕಾಲುದಾರಿಯನ್ನೇ ಹೆದ್ದಾರಿಯನ್ನಾಗಿ ಪರಿವರ್ತಿಸಿದರೆ ಹೇಗೆ? ಅದು ಸಾಧ್ಯವೇ? ಒಂದಾನೊಂದು ಕಾಲದಲ್ಲಿ ನಾನು ವೃತ್ತಿನಿರತ ವಿಜ್ಞಾನಿಯಾಗಿದ್ದೆ. ಈಗಲೂ ಪ್ರವೃತ್ತಿಯಿಂದ ವಿಜ್ಞಾನಿಯೇ. ನನ್ನೊಳಗೆ ಕುಳಿತಿದ್ದ ಭೌತಶಾಸ್ತ್ರ, ಇಂಜಿನಿಯಿರಿಂಗ್, ಆಂಟೆನಾಶಾಸ್ತ್ರಗಳೆಲ್ಲ ಹೊರಗೆ ಬಂದವು. ಸಿಗ್ನಲಿಗೆ ಒಂದು ಸಿಗ್ನಲ್ ಬೂಸ್ಟರ್ ಅಂದರೆ ಸಿಗ್ನಲನ್ನು ಹೆಚ್ಚು ಮಾಡುವಂತಹದು ತಯಾರಿಸಿದರೆ ಹೇಗೆ ಎಂದು ಆಲೋಚನೆ ಮಾಡಿದೆ. ಮನೆಯಲ್ಲಿ ಹುಡುಕಿದಾಗ ಹಳೆಯ ಡಬ್ಬ ಒಂದು ದೊರೆಯಿತು. ಅದನ್ನೇ ಕತ್ತರಿಸಿ ಪ್ರತಿಫಲನಾತ್ಮಕ ಸಿಗ್ನಲ್ ಬೂಸ್ಟರ್ ಮಾಡಿದೆ. ವಿವರಗಳು ಮಂದಿನ ಪ್ಯಾರಾಗಳಲ್ಲಿ.
ಸಿಗ್ನಲ್ ಬೂಸ್ಟರ್ ಮಾಡುವ ವಿಧಾನ
ಒಂದು ಹಳೆಯ ಡಬ್ಬ ತೆಗೆದುಕೊಳ್ಳಿ. ಅದು ಸಿಲಿಂಡರಿನಾಕೃತಿಯಲ್ಲಿರಬೇಕು ಹಾಗೂ ಅದು ಲೋಹದಿಂದ ಮಾಡಿರಬೇಕು. ಅಮುಲ್ ಅಥವಾ ಬೋರ್ನ್‌ವಿಟಾ ಡಬ್ಬ ಈ ಕೆಲಸಕ್ಕೆ ಹೇಳಿ ಮಾಡಿಸಿದಂತಿದೆ. ಅದರ ಮುಚ್ಚಳ ನಮ್ಮ ಕೆಲಸಕ್ಕೆ ನಿರುಪಯುಕ್ತ. ಉಳಿದ ಡಬ್ಬವನ್ನು ಉದ್ದಕ್ಕೆ ಕತ್ತರಿಸಿ. ಡಬ್ಬ ಕತ್ತರಿಸಲೆಂದೇ ಮಾರುಕಟ್ಟೆಯಲ್ಲಿ ವಿಶೇಷ ಕತ್ತರಿ ಸಿಗುತ್ತದೆ. ಅದನ್ನು ಬಳಸಿದರೆ ಕೆಲಸ ಸುಗಮ. ಚಿಕ್ಕ ಗರಗಸವನ್ನು ಕೂಡ ಬಳಸಬಹುದು. ಕತ್ತರಿಸಿದ ನಂತರ ನಿಮಗೆ ಅರ್ಧ ಸಿಲಿಂಡರಾಕೃತಿಯ ಡಬ್ಬ ದೊರೆಯುತ್ತದೆ. ಅದರ ತಳವನ್ನೂ ಅರಿಯಾಗಿ ಅರ್ಧಕ್ಕೆ ಕತ್ತರಿಸಬೇಕು. ಈಗ ಅದರ ತಳದ ಮಧ್ಯಭಾಗದಲ್ಲಿ ಸುಮಾರು ಒಂದು ಸೆ.ಮೀ. ಉದ್ದ ಮತ್ತು ಸುಮಾರು ಅರ್ಧ ಸೆ.ಮೀ. ಅಗಲಕ್ಕೆ ಕತ್ತರಿಸಬೇಕು. ಇದು ಮುಂದಕ್ಕೆ ಉಪಯೋಗಕ್ಕೆ ಬರುತ್ತದೆ.
ಡಬ್ಬದಿಂದ ಬಾಣಲೆಗೆ

