ಕಣ್ಣುಗಳಿಗೆ ಅಪಾರ ಶಕ್ತಿಯಿದೆ. ಕಣ್ಣುಗಳಿಂದ ಜಾಡವಿದ್ಯೆಯನ್ನು ಮಾಡುವರ ಕುರಿತು ಕೇಳಿರಬಹುದು. ಹುಡುಗಿಯ ಕಣ್ಣಿನ ನೋಟಕ್ಕೆ ಮರುಳಾದವರ ಕಥೆ ಸದ್ಯಕ್ಕೆ ಬೇಡ. ಇನ್ನು ಮುಂದೆ ಕಣ್ಣಿನ ಸಂಜ್ಞೆಯಿಂದ ಲ್ಯಾಪ್ ಟಾಪನ್ನು ಹೇಳಿದಂತೆ ಕೇಳಿಸಬಹುದು. ಇದ್ಯಾವ ಮಂತ್ರವಿದ್ಯೆ ಎಂದು ಕಂಪ್ಯೂಟರ್ ಮುಂದೆ ಕಣ್ಣು ಮಿಟುಕಿಸದಿರಿ. ಮುಂದೆ ಓದಿ.
ಇದೀಗ ಲಾಸ್ ಏಂಜಲ್ಸ್ ನಲ್ಲಿ ನಡೆಯುತ್ತಿರುವ ಗ್ರಾಹಕರ ಎಲೆಕ್ಟ್ರಾನಿಕ್ ವಸ್ತುಗಳ ಪ್ರದರ್ಶನದಲ್ಲಿ ಗ್ರಾಹಕರನ್ನು ಅತ್ಯಂತ ಸೆಳೆಯುತ್ತಿರುವ ವಸ್ತು ಗೆಶ್ಚರ್ ಲ್ಯಾಪ್ ಟಾಪ್. ವಿಂಡೋಸ್ 8 ಫ್ಲಾಟ್ ಫಾರ್ಮ್ ಹೊಂದಿರುವ ಈ ಲ್ಯಾಪ್ ಟಾಪ್ ಕಣ್ಣಿನ ಸನ್ನೆಯನ್ನು ಅರ್ಥೈಹಿಸಿಕೊಂಡು ಕಾರ್ಯ ನಿರ್ವಹಿಸುತ್ತಿದೆ! ಇದು ನಯನ ಮನೋಹರವಾದ ನಯನ ಲ್ಯಾಪ್ ಟಾಪ್.
ಕಣ್ಣಿನ ನೋಟ, ಸಂಜ್ಞೆಯಿಂದ ಕಾರ್ಯನಿರ್ವಹಿಸುವಂತೆ ಈ ಲ್ಯಾಪ್ ಟಾಪನ್ನು ಅಭಿವೃದ್ಧಿಪಡಿಸಲಾಗಿದೆ. ಈ ತಂತ್ರಜ್ಞಾನದಲ್ಲಿ ಕಣ್ಣು ಇನ್ ಪುಟ್ ಆಗಿ ಕೆಲಸ ಮಾಡುತ್ತದೆ. ಇದರಲ್ಲಿ ಯಾವುದಾದರೂ ಫೈಲ್ ಓಪನ್ ಮಾಡಬೇಕೆಂದು ಬಯಸಿದರೆ ಅದರತ್ತ ದೃಷ್ಟಿ ಇಟ್ಟು ವಿಂಡೋಸ್ ಕೀ ಪ್ರೆಸ್ ಮಾಡಿದರೆ ಸಾಕು. ಅದು ಓಪನ್ ಆಗುತ್ತದೆ.
ತೊಬೀ ತಂತ್ರಜ್ಞಾನ ಬಳಸಿ ತಯಾರಿಸಲಾದ ಈ ಲ್ಯಾಪ್ ಟಾಪ್ ನಲ್ಲಿ ಎರಡು ಐ ಆರ್ ಕ್ಯಾಮೆರಾ ಇದ್ದು ಇದು ಕಣ್ಣಿನ ಅಕ್ಷಿಪಟಲದಲ್ಲಿ ಕಾಣುತ್ತಿರುವ ವಸ್ತುವನ್ನು ಗ್ರಹಿಸಿ ಅದರ ಸಂದೇಶವನ್ನು ಲ್ಯಾಪ್ ಟಾಪ್ ಗ್ರಹಿಸುವಂತೆ ಮಾಡುತ್ತದೆ. ಆಗ ವಿಂಡೋಸ್ ಕೀಯನ್ನು ಪ್ರೆಸ್ ಮಾಡಿದರೆ ಲ್ಯಾಪ್ ಟಾಪ್ ಕಣ್ಣಿನ ನಿಯಂತ್ರಣಕ್ಕೆ ಒಳಪಡುತ್ತದೆ.
ಈ ಲ್ಯಾಪ್ ಟಾಪ್ ಬೆಲೆಯ ಬಗ್ಗೆ ನಿಖರವಾಗಿ ತಿಳಿದು ಬರದಿದ್ದರೂ ಇದು ಸುಮಾರು 200-400 ಡಾಲರ್ ನಷ್ಟು ದುಬಾರಿ ಇರಲಿದೆ ಎಂಬ ವದಂತಿಯಿದೆ.
No comments:
Post a Comment