Friday, 22 June 2012

ಆಂಡ್ರಾಯ್ಡ ವೈರಸ್‌ಗಳು!

 ಪ್ರಜಾವಾಣಿ ವಾರ್ತೆ
ಕಳೆದ ಎರಡು ವರ್ಷಗಳಲ್ಲಿ ಮೊಬೈಲ್ ಕಂಪ್ಯೂಟಿಂಗ್ ಬಳಕೆ ದ್ವಿಗುಣಗೊಂಡಿದೆ. ಅದರಲ್ಲೂ ಗೂಗಲ್ ಆಂಡ್ರಾಯ್ಡ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ದಾಂಗುಡಿಯಿಟ್ಟ ನಂತರ ಮೊಬೈಲ್ ಅಂತರ್ಜಾಲ ಬಳಕೆ ವಿಧಾನವೇ ಬದಲಾಗಿ ಹೋಗಿದೆ ಎನ್ನುತ್ತದೆ ಮೊಬೈಲ್ ಮಾರುಕಟ್ಟೆ ಸಂಶೋಧನಾ ಸಂಸ್ಥೆ `ಗಾರ್ಟ್‌ನರ್` ನಡೆಸಿದ ಸಮೀಕ್ಷೆ.

ಮೊಬೈಲ್ ಮೂಲಕ ಅಂತರ್ಜಾಲ ಸಂಪರ್ಕ ಪಡೆದುಕೊಳ್ಳುವ ಗ್ರಾಹಕ ತನಗೆ ಅರಿವಿಲ್ಲದಂತೆ ಹಲವು `ಮಾಲ್‌ವೇರ್`ಗಳನ್ನು ತನ್ನ ಹ್ಯಾಂಡ್‌ಸೆಟ್‌ನೊಳಗೆ ಬರಮಾಡಿಕೊಳ್ಳುತ್ತಾನೆ. ಸಾಮಾನ್ಯ ಮೊಬೈಲ್ ಬ್ರೌಸರ್‌ಗಳಿಗೆ ಈ ವೈರಸ್‌ಗಳನ್ನು ತಡೆಯುವ ಸಾಮರ್ಥ್ಯ ಇಲ್ಲದಿರುವುದರಿಂದ ಇವು ಸುಲಭವಾಗಿ ಒಳನುಸುಳಿ ದತ್ತಾಂಶಗಳನ್ನು ಹಾಳುಮಾಡುತ್ತವೆ.

ಉಳಿದ ಮೊಬೈಲ್ ಆಪರೇಟಿಂಗ್ ಸಿಸ್ಟೆಂಗಳಿಗೆ ಹೋಲಿಸಿದರೆ ಆಂಡ್ರಾಯ್ಡ ಕಾರ್ಯನಿರ್ವಹಣಾ ತಂತ್ರಾಂಶ ಇರುವ ಸ್ಮಾರ್ಟ್‌ಪೋನ್‌ಗಲ್ಲಿ ವೈರಸ್ ಭೀತಿ ಹೆಚ್ಚು ಎನ್ನುತ್ತದೆ ಕ್ಯಾಸ್ಪ್ರಸ್ಕಿ ಲ್ಯಾಬ್‌ನ ಸಂಶೋಧನೆ.

`ಆಂಡ್ರಾಯ್ಡನಲ್ಲಿ ಮಾಲ್‌ವೇರ್ ಹರಡುವಿಕೆಯು ಕಳೆದ ಎರಡು ವರ್ಷಗಳಲ್ಲಿ       ಶೇ 400ರಷ್ಟು ಹೆಚ್ಚಿದೆ` ಎನ್ನುತ್ತದೆ ಇತ್ತೀಚೆಗೆ ಬಿಡುಗಡೆಗೊಂಡ ಜುನಿಫರ್ ನೆಟ್‌ವರ್ಕ್‌ನ `ಗ್ಲೋಬಲ್ ಮೊಬೈಲ್ ಥ್ರೆಟ್` ವರದಿ.  2010ರ ಜನವರಿಯಲ್ಲಿ ಆಂಡ್ರಾಯ್ಡ ಮಾರುಕಟ್ಟೆಯಲ್ಲಿ ಮೊದಲ ಬ್ಯಾಂಕಿಂಗ್ ಫಿಶಿಂಗ್ ಅಪ್ಲಿಕೇಷನ್ ಕಾಣಿಸಿಕೊಂಡಿತ್ತು. ಇದನ್ನು `ಡ್ರಾಯ್ಡ 09` ಎಂದು ಗುರುತಿಸಲಾಗಿತ್ತು.

ಆನ್‌ಲೈನ್ ಬ್ಯಾಂಕಿಂಗ್ ಮಾಹಿತಿ ಕದಿಯಲು ಈ ವೈರಸ್ ಅಭಿವೃದ್ಧಿಪಡಿಸಲಾಗಿತ್ತು. ಅದೇ ವರ್ಷ ಮಾರ್ಚ್‌ನಲ್ಲಿ ಮೊದಲ ಆಂಡ್ರಾಯ್ಡ `ಬೂಟ್‌ನೆಟ್` ವೈರಸ್‌ಕಾಣಿಸಿಕೊಂಡಿತು. ಮತ್ತೊಂದು ಅಪಾಯಕಾರಿ ಸ್ಪೈವೇರ್ `ಟಾಪ್ ಸ್ನೇಕ್` ವರದಿಯಾಗಿದ್ದು ಜುಲೈನಲ್ಲಿ. ಗೇಮಿಂಗ್ ತಂತ್ರಾಂಶವೊಂದರ  ಮೂಲಕ ಹ್ಯಾಂಡ್‌ಸೆಟ್ ಪ್ರವೇಶಿಸುವ ಈ ಕುತಂತ್ರಾಂಶ ನಂತರ ಇಡೀ `ಜಿಪಿಎಸ್` ವ್ಯವಸ್ಥೆಯನ್ನು ಹಾಳುಗೆಡವುತ್ತಿತ್ತು. `ಜಿಪಿಎಸ್` ಗೂಢಾಚರಣೆಗೆ ಈ ಸ್ಪೈವೇರ್ ಅಭಿವೃದ್ಧಿಪಡಿಸಲಾಗಿತ್ತು ಎನ್ನುವ ವರದಿಗಳಿವೆ. 

`ಫೇಕ್ ಪ್ಲೆಯರ್ 13: ಆಂಡ್ರಾಯ್ಡ ಹ್ಯಾಂಡ್‌ಸೆಟ್‌ಗಳಲ್ಲಿ ಪತ್ತೆಯಾದ ಮೊದಲ `ಎಸ್‌ಎಂಎಸ್` ಟ್ರೋಜನ್ ಇದು. ರಷ್ಯಾದ ಮೊಬೈಲ್ ಬಳಕೆದಾರರು ಇದರಿಂದ ಸಾಕಷ್ಟು ಹಾನಿ ಅನುಭವಿಸಿದರು. ಈ ವೈರಸ್ ತಾನೇ ಸ್ವಯಂಚಾಲಿತವಾಗಿ ಅನಾಮಿಕ ಸಂಖ್ಯೆಗಳಿಗೆ `ಎಸ್‌ಎಂಎಸ್` ಕಳುಹಿಸುತ್ತಿತ್ತು.

ಪ್ರತಿ ಎಸ್‌ಎಂಎಸ್‌ಗೆ ಬಳಕೆದಾರರ 6 ಡಾಲರ್(ಅಂದಾಜು ರೂ. 330) ಕಡಿತವಾಗುತ್ತಿತ್ತು. ಅಸಲಿಗೆ  ಈ ಅಪ್ಲಿಕೇಷನ್   ಆಂಡ್ರಾಯ್ಡ ಮಾರುಕಟ್ಟೆಗೆ ಬಿಡುಗಡೆಯಾಗಿಯೇ ಇರಲಿಲ್ಲ.  ನವೆಂಬರ್‌ನಲ್ಲಿ ಆಂಡ್ರಾಯ್ಡನ `ಆ್ಯಂಗ್ರಿ ಬರ್ಡ್` ಗೇಮ್ ಅಪ್ಲಿಕೇಷನ್ ಮಾರುಕಟ್ಟೆಗೆ ಬಂದಾಗ, ಅದರ ಹೆಚ್ಚುವರಿ ತಂತ್ರಾಂಶಗಳ ಜತೆ `ಫೇಕ್ ಪ್ಲೇಯರ್` ಕೂಡ ಬಳಕೆದಾರನ ಗಮನಕ್ಕೆ ಬರದಂತೆ ಡೌನ್‌ಲೋಡ್ ಆಗಿ ಮೊಬೈಲ್ ಸೇರಿಕೊಳ್ಳುತ್ತಿತ್ತು.

`ಎಂಎಸ್‌ಒ` ಟ್ರೋಜನ್ ಎಸ್: ಮೊಬೈಲ್ ಮೂಲಕ ನಡೆಯುವ ಹಣಕಾಸು ವಹಿವಾಟು ಮಾಹಿತಿಯನ್ನು ಕದಿಯಲು ಅಭಿವೃದ್ಧಿಪಡಿಸಿದ ವೈರಸ್ ಇದು. ನೆಟ್‌ಕ್ವಿನ್ ಮೊಬೈಲ್ ಸೆಕ್ಯುರಿಟಿ ಸೆಂಟರ್ ಕಳೆದ ವರ್ಷದ ಜೂನ್‌ನಲ್ಲಿ ಈ ವೈರಸ್ ಪತ್ತೆ ಹಚ್ಚಿದೆ. ಒಮ್ಮೆ ಹ್ಯಾಂಡ್‌ಸೆಟ್ ಪ್ರವೇಶಿಸಿದರೆ, ಅನಾಮಿಕ ಸಂಖ್ಯೆಗಳಿಗೆ ಎಸ್‌ಎಂಎಸ್ ಕಳುಹಿಸುವ ಮೂಲಕ ಹಾನಿ ಉಂಟು ಮಾಡುತ್ತದೆ. `ಬಿಟ್ ಇನ್ಫೋ ಸ್ಟೀಲರ್` ಎನ್ನುವುದು ಮೆಮೊರಿ ಕಾರ್ಡ್‌ಗಳ ಮೂಲಕ ಹರಡುವ ಮತ್ತೊಂದು ವೈರಸ್.

  `ಮೈ ಅವರ್ ನೆಟ್, ಡ್ರೀಮ್,  `ಜಿಮಿನಿ` ಇವು ಇತ್ತೀಚೆಗೆ ಪತ್ತೆಯಾಗಿರುವ ಮತ್ತಿತರ ಆಂಡ್ರಾಯ್ಡ ಮೊಬೈಲ್ ವೈರಸ್‌ಗಳು. ಈ ವೈರಸ್‌ಗಳು ಬ್ಯಾಟರಿ ಶಕ್ತಿ ಬೇಗನೆ ಕಡಿಮೆಯಾಗುವಂತೆ ಮಾಡಿ, ಹ್ಯಾಂಡ್‌ಸೆಟ್‌ನಲ್ಲಿರುವ ದತ್ತಾಂಶಗಳನ್ನು ಅಳಿಸಿ ಹಾಕುತ್ತವೆ.  ಮೊಬೈಲ್ ವೈರಸ್ ದಾಳಿಯಿಂದ ರಕ್ಷಣೆ ಒದಗಿಸಲು ಬುಲ್‌ಗಾರ್ಡ್ ಮೊಬೈಲ್ ಸೆಕ್ಯುರಿಟಿ, ಕ್ಯಾಸ್ಪ್ರಸ್ಕಿ ಮೊಬೈಲ್ ಸೆಕ್ಯುರಿಟಿ ಮತ್ತು `ಇಎಸ್‌ಇಟಿ` ಆ್ಯಂಟಿ ವೈರಸ್ ತಂತ್ರಾಂಶಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ

No comments:

Post a Comment