ನಮ್ಮ ಅಂತರ್ಜಾಲ ತಾಣದ ಮೋಟಾರು ವಾಹನ ಸುದ್ದಿಜಾಲ ವಿಭಾಗದಲ್ಲಿ ಕೆಲಸ ಮಾಡಲು ಪತ್ರಕರ್ತರು ಬೇಕಾಗಿದ್ದಾರೆ. ಹುದ್ದೆಯ ಸಂಖ್ಯೆ ಒಂದು. ಕಾರು, ಮೋಟಾರ್ ಬೈಕು, ಸ್ಕೂಟರ್, ವ್ಯಾನು ಮುಂತಾದ ವಾಹನ ಕಂಪನಿಗಳ ಮಾಹಿತಿಗಳು, ಅದರ ಉತ್ಪಾದನೆ ಮತ್ತು ಮಾರುಕಟ್ಟೆಗೆ ಬಿಡುಗಡೆಯಾಗುತ್ತಿರುವ ವಿವರಗಳು, ಮಾರಾಟ ಜಾಲ, ಅದರ ಬೆಲೆ ಮುಂತಾದ ಮಾಹಿತಿಗಳನ್ನು ಸುದ್ದಿ ಶೈಲಿಯಲ್ಲಿ, ಸುದ್ದಿ ಸಂಕ್ಷೇಪ ಮಾದರಿಯಲ್ಲಿ ಚಿಕ್ಕದಾಗಿ ಚೊಕ್ಕದಾಗಿ ಬರೆಯುವ ಜಾಣ್ಮೆ ಅರ್ಜಿಹಾಕಿಕೊಳ್ಳುವ ಪತ್ರಕರ್ತರಿಗೆ ಇರಬೇಕು.
ಅತಿವೇಗದಲ್ಲಿ ಬೆಳೆಯುತ್ತಿರುವ ವಾಹನ ಮಾರುಕಟ್ಟೆಯ ಮೇಲೆ ಅವ್ಯಾಹತ ನಿಗಾ ಇಡಬಲ್ಲ ಆಸಕ್ತಿ ಇರತಕ್ಕದ್ದು. ಮನೆಮಂದಿಯ ಉಪಯೋಗಕ್ಕಾಗಿ ಒಂದು ಕಾರು ಕೊಳ್ಳಬೇಕು ಎಂದು ಯೋಚಿಸುತ್ತಿರುವವರಿಗೆ, ಕಾಲೇಜಿಗೆ ಬೈಕಿನಲ್ಲೇ ಹೋಗಲು ಆಸೆಪಡುವ ಹುಡುಗ ಹುಡುಗಿಯರಿಗೆ ನಿಮ್ಮ ಕರಾರುವಾಕ್ಕು ಮಾಹಿತಿ ಭರಿತ ಬರವಣಿಗೆ ಮಾರ್ಗದರ್ಶಿಯಾಗಬೇಕು. ಸಾಲು ಸಾಲಾಗಿ ಮಾರುಕಟ್ಟೆಗೆ ಬರಲಿರುವ ಹೊಸ ವಾಹನಗಳ ವೈಶಿಷ್ಟ್ಯಗಳೇನು? ಶೋ ರೂಂಗಳ ವಿಳಾಸ, ಒಟ್ಟಾರೆ ವಾಹನ ಪ್ರಪಂಚದ ಆಗುಹೋಗುಗಳಿಗೆ ನಿಮ್ಮ ಬರವಣಿಗೆ ಕನ್ನಡ ಕನ್ನಡಿಯಾಗಬೇಕು. ಮುಖ್ಯವಾಗಿ : ನೇರವಾಗಿ, ಸ್ಫುಟವಾಗಿ, ಸರಳ ಕನ್ನಡದಲ್ಲಿ ಬರೆಯುವ ಕೌಶಲ್ಯ ಅತ್ಯಗತ್ಯ.
ಅರ್ಹತೆ : ಸುಮಾರು 22ರಿಂದ 27 ವಯೋಮಾನದ ಆಕಾಂಕ್ಷಿ ಪತ್ರಕರ್ತರಿಗೆ ಅರ್ಜಿಹಾಕಿಕೊಳ್ಳಲು ಸ್ವಾಗತ. ದಿನಕ್ಕೆ 8 ಗಂಟೆ ಕಾಲ ಕಂಪ್ಯೂಟರ್ ಮುಂದೆ ಕುಳಿತು ವಾಹನ ಮಾರುಕಟ್ಟೆಯ ಧ್ಯಾನ ಮತ್ತು ಅಧ್ಯಯನ ನಡೆಸಿ, ಮಾಹಿತಿ ಸಂಗ್ರಹಣೆ ಮಾಡಿ, ಲಗುಬಗೆಯಿಂದ ಸುದ್ದಿ ತಯಾರಿಸುವ ವೇಗಿಗಳಿಗೆ ಆದ್ಯತೆ ಕೊಡಲಾಗುವುದು. ಅಂತರ್ಜಾಲದ ಪರಿಚಯ ಸಾಕಷ್ಟು ಚೆನ್ನಾಗಿಯೇ ಇರಬೇಕು. ಯೂನಿಕೋಡ್ ಬಳಸಿಕೊಂಡು ನೋಟ್ ಪ್ಯಾಡಿನಲ್ಲಿ ಸರಸರ ಸುದ್ದಿ ಬರೆಯುವುದಕ್ಕೆ ಕೀಲಿ ಮಣೆ ಬಳಸುವ ಜ್ಞಾನ ಗೊತ್ತಿರಬೇಕು. ಅಭ್ಯರ್ಥಿಗಳು ಈಗಾಗಲೇ ಕಂಪ್ಯೂಟರ್ ಬಳಸಿಕೊಂಡೇ ಕನ್ನಡದಲ್ಲಿ ಬರೆಯುವ ವಿದ್ಯೆಯನ್ನು ಕರಗತ ಮಾಡಿಕೊಂಡಿದ್ದರೆ ಅವರು ನಮಗೆ ಬೇಕು. ನಾವು ನಡೆಸುವ ಲಿಖಿತ ಮತ್ತು ಮೌಖಿಕ ಪರೀಕ್ಷೆಗೆ ಒಟ್ಟು ಹತ್ತು ಅಂಕಗಳಿರುತ್ತವೆ. ಅಂಕಗಳ ವಿಭಜನೆ ಇಂತಿದೆ :
ಕನ್ನಡ ಅಂತರ್ಜಾಲ ತಾಣದಲ್ಲಿ ವೆಬ್ ರೈಟರ್ ಆಗಬೇಕೆಂಬ ಆಸಕ್ತಿಗೆ 4. ಆಟೋ ಸುದ್ದಿ ಸಂಗ್ರಹಣೆ, ಸುದ್ದಿ ಸಂಸ್ಕಾರ ಮಾಡುವ ಕಲೆಗೆ 3. ಅಂತರ್ಜಾಲದ ಪರಿಚಯ, ಇಂಗ್ಲಿಷ್ ಭಾಷಾ ಜ್ಞಾನದ ಜತೆಗೆ ಕಂಪ್ಯೂಟರ್ ನಲ್ಲಿ ಕನ್ನಡ ಬರೆಯುವ ಅನುಭವಕ್ಕೆ 2. ನಿತ್ಯ ಕಲಿಯುವ ಆಸಕ್ತಿ ಇದ್ದರೆ ಅದಕ್ಕೆ 1 ಅಂಕ. ಪತ್ರಿಕೋದ್ಯಮದಲ್ಲಿ ಔಪಚಾರಿಕ ಶಿಕ್ಷಣ, ಪದವಿ ಪಡೆದಿದ್ದರೆ ಸ್ವಾಗತವೇ. ಇಂಟರ್ನೆಟ್ ಪತ್ರಿಕೋದ್ಯಮದಲ್ಲಿ ಆಸಕ್ತಿ ಹಾಗೂ ಸುಲಲಿತ ಓದಿಗಾಗಿ ಸುದ್ದಿಗಳನ್ನು ಸಿದ್ಧಪಡಿಸುವ ಕಲೆ ಮತ್ತು ಶ್ರದ್ಧೆಯೇ ನಿರ್ಣಾಯಕ. ಕೆಲಸ ಮಾಡುವ ಸ್ಥಳ, ಜಯನಗರ, ಬೆಂಗಳೂರು.
ಸಂಬಳ ಮತ್ತು ನೇಮಕಾತಿ ನಿಯಮಗಳು ಅಭ್ಯರ್ಥಿಗಳ ವಿದ್ಯಾರ್ಹತೆ, ಅನುಭವ ಮತ್ತು ಆಸಕ್ತಿಯ ತೀರ್ವತೆಗಳನ್ನು ಅವಲಂಬಿಸಿರುತ್ತದೆ. ನಿಮ್ಮ ಅರ್ಜಿಗಳನ್ನು ರವಾನಿಸುವ ವಿಳಾಸ shami.sk@greynium.com. ಈ ಸಂಬಂಧ ದೂರವಾಣಿ, ಎಸ್ ಎಂಎಸ್ ಮೂಲಕ ವಿವರಗಳನ್ನು ನಾವು ನೀಡಲಾರೆವು. ಅರ್ಜಿ ಹಾಕಲು ಕಡೆ ದಿನಾಂಕ 1 ಡಿಸೆಂಬರ್ 2010. ನಿಮ್ಮ ಅರ್ಜಿಗಳನ್ನು ಈ ಮೇಲ್ ಮುಖಾಂತರವೇ ಕಳಿಸಬೇಕು. ಸಬ್ಜೆಕ್ಟ್ ಲೈನಿನಲ್ಲಿ Auto News/Copy Writer ಎಂದು ನಮೂದಿಸಬೇಕು.
No comments:
Post a Comment