Tuesday 14 August 2012

ಮನೆಯಲ್ಲೇ ಮಾಡಿ -ಸಿಗ್ನಲ್ ಬೂಸ್ಟರ್

ಗ್ಯಾಜೆಟ್ ಲೋಕ ದಿಂದ

ಬೆಂಗಳೂರಿನಿಂದ ಕೇವಲ ೫ ಕಿ.ಮೀ. ಹೊರಗಡೆ ಹೋದರೆ ಸಾಕು ಮೊಬೈಲ್, ಅಂತರಜಾಲ, ೩ಜಿ, ಎಲ್ಲ ಸಿಗ್ನಲ್‌ಗಳೂ ಅಂಬೆಗಾಲಿಡುತ್ತವೆ. ಇಂತಹ ಸಂದರ್ಭಗಳಲ್ಲಿ ೩ಜಿ ಡಾಟಾಕಾರ್ಡ್ ಜೊತೆ ಗುದ್ದಾಡಿ ಅದಕ್ಕೊಂದು ಸಿಗ್ನಲ್ ಬೂಸ್ಟರ್ ಅನ್ನು ಮನೆಯಲ್ಲೆ ತಯಾರಿಸಿ ಬಳಸಿದರೆ ಹೇಗೆ?

ಅಂತರಜಾಲಕ್ಕೆ ಮಾಹಿತಿಹೆದ್ದಾರಿ (information superhighway) ಎಂಬ ಹೆಸರಿದೆ. ಈ ಹೆಸರು ಬೆಂಗಳೂರಿನಂತಹ ಮಾಹಾನಗರಕ್ಕೆ ಮಾತ್ರ ಅನ್ವಯ. ಬೆಂಗಳೂರಿನಿಂದ ಹೊರಗೆ ಕಾಲಿಟ್ಟೊಡನೆ ಅದು ಮಾಹಿತಿಯ ಕಾಲುದಾರಿ ಆಗುತ್ತದೆ. ಬೆಂಗಳೂರಿನ ಹೊರವರ್ತುಲ ರಸ್ತೆಯಿಂದ ಕೇವಲ ಒಂದೂವರೆ ಕಿ.ಮೀ. ದೂರದಲ್ಲಿರುವ ಶ್ರೀಗಂಧದ ಕಾವಲು ಎನ್ನುವ ಬಡಾವಣೆಗೆ ಮೂರು ವಾರಗಳ ಹಿಂದೆ ಮನೆ ಬದಲಾಯಿಸಿದೆ. ಇಲ್ಲಿ ಬಿಎಸ್‌ಎನ್‌ಎಲ್‌ನವರ ಸ್ಥಿರವಾಣಿ ಸಂಪರ್ಕ ಇಲ್ಲ. ಮೊಬೈಲ್ ಸಿಗ್ನಲ್ ಬೇಕಿದ್ದರೆ ಮನೆಯಿಂದ ಹೊರಗೆ ಹೋಗಬೇಕು. ೩ಜಿ ಡಾಟಾಕಾರ್ಡ್‌ಗೂ ಅದೇ ಗತಿ. ಮನೆಯೊಳಗೆ ಅದು ಕೇವಲ ೧ಜಿ ಅರ್ಥಾತ್ ಜಿಪಿಆರ್‌ಎಸ್ ವೇಗದಲ್ಲಿ ಕೆಲಸ (?) ಮಾಡುತ್ತದೆ. ಈ ವೇಗದಲ್ಲಿ ಸರಿಯಾಗಿ ಇಮೈಲ್ ಕೂಡ ಬರುವುದಿಲ್ಲ. ಬಿಎಸ್‌ಎನ್‌ಎಲ್ ಕಚೇರಿಗೆ ಹೋಗಿ ಇಂಜಿನಿಯರ್ ಅವರನ್ನು ಕಂಡು ಬಂದೆ. ನಿಮ್ಮ ಊರಿಗೆ ಸಂಪರ್ಕ ನಿಡಲು ಕೇಬಲ್ ಇಲ್ಲ. ಮೇಲಿನವರು ಕೇಬಲ್ ನೀಡಿದರೆ ಸಂಪರ್ಕ ನೀಡುತ್ತೇವೆ ಎಂಬ ವಾಗ್ದಾನ ಮಾತ್ರ ನೀಡಿ ಕಳುಹಿಸಿದರು (ದಾನಗಳಲ್ಲಿ ಅತಿ ಸುಲಭ ದಾನ -ವಾಗ್ದಾನ!). ಈಗ ಸದ್ಯಕ್ಕಂತೂ ಸ್ಥಿರವಾಣಿ ಇಲ್ಲ, ಆದುದರಿಂದ ಬ್ರಾಡ್‌ಬ್ಯಾಂಡೂ ಇಲ್ಲ. ಬಿಎಸ್‌ಎನ್‌ಎಲ್‌ನವರ ೩ಜಿ ಡಾಟಾಕಾರ್ಡ್ ಮೂಲಕ ಅಂತರಜಾಲ ಸಂಪರ್ಕ ಮಾಡೋಣವೆಂದರೆ ಅದು ಮನೆಯೊಳಗೆ ಕೇವಲ ೧ಜಿ, ಕಿಟಿಕಿಯಲ್ಲಿ ಇಟ್ಟಾಗ ಮಾತ್ರ ೩ಜಿ. ಬಿಎಸ್‌ಎನ್‌ಎಲ್‌ನ ಮೇಲಧಿಕಾರಿಗಳು ಬಹುಶಃ ಬಿಎಸ್‌ಎನ್‌ಎಲ್‌ನ ಹೆಸರು ಕೆಡಿಸಿ ಕೊನೆಗೆ ವಿಎಸ್‌ಎನ್‌ಎಲ್ ಅನ್ನು ಟಾಟಾದವರಿಗೆ ಮಾರಿದಂತೆ ಇದನ್ನೂ ಖಾಸಗಿಯವರಿಗೆ ಮಾರಿ ಕೈತೊಳೆದುಕೊಳ್ಳಲು ಕಿತಾಪತಿ ನಡೆಸುತ್ತಿರುವಂತೆ ನನಗೇನೋ ಅನುಮಾನ ಬರುತ್ತಿದೆ.

ರಿಲಯನ್ಸ್ ನೆಟ್‌ಕನೆಕ್ಟ್ ಮತ್ತು ಟಾಟಾ ಫೋಟೋನ್ ಮ್ಯಾಕ್ಸ್‌ಗಳನ್ನು ಕೂಡ ಬಳಸಿ ನೋಡಿದೆ. ಅವೆರಡರಲ್ಲಿ ಟಾಟಾ ಫೋಟೋನ್ ಮ್ಯಾಕ್ಸ್ ಮಾತ್ರ ಮನೆಯ ಯಾವ ಮೂಲೆಗೆ ಹೋದರೂ ಒಂದೇ ವೇಗವನ್ನು ನೀಡಿತು. ಟಾಟಾ ಫೋಟೋನ್ ಮ್ಯಾಕ್ಸ್ ಬಗ್ಗೆ ಎರಡು ವಾರ ಹಿಂದೆ ಗ್ಯಾಜೆಟ್ ಲೋಕ ಅಂಕಣದಲ್ಲಿ ಬರೆಯಲಾಗಿತ್ತು.

ಅಂತರಜಾಲ ಸಂಪರ್ಕ ಇಲ್ಲದಿದ್ದರೆ ನನ್ನಂತಹ ಜಾಲಿಗ ಬದುಕುವುದು ಹೇಗೆ? ನಾಗೇಶ ಹೆಗಡೆಯವರು ಒಂದು ಕಡೆ ಬರೆದುಕೊಂಡಂತೆ ಅಂತರಜಾಲ ಬಟ್ಟು ಜೀವಜಾಲದ ಕಡೆ ಗಮನ ಹರಿಸಲೇ? ಆದರೆ ನನಗೂ ಜೀವಶಾಸ್ತ್ರಕ್ಕೂ ಮೊದಲಿನಿಂದಲೇ ಎಣ್ಣೆ-ಸೀಗೆ ಸಂಬಂಧ. ಈ ಮಾಹಿತಿಯ ಕಾಲುದಾರಿಯನ್ನೇ ಹೆದ್ದಾರಿಯನ್ನಾಗಿ ಪರಿವರ್ತಿಸಿದರೆ ಹೇಗೆ? ಅದು ಸಾಧ್ಯವೇ? ಒಂದಾನೊಂದು ಕಾಲದಲ್ಲಿ ನಾನು ವೃತ್ತಿನಿರತ ವಿಜ್ಞಾನಿಯಾಗಿದ್ದೆ. ಈಗಲೂ ಪ್ರವೃತ್ತಿಯಿಂದ ವಿಜ್ಞಾನಿಯೇ. ನನ್ನೊಳಗೆ ಕುಳಿತಿದ್ದ ಭೌತಶಾಸ್ತ್ರ, ಇಂಜಿನಿಯಿರಿಂಗ್, ಆಂಟೆನಾಶಾಸ್ತ್ರಗಳೆಲ್ಲ ಹೊರಗೆ ಬಂದವು. ಸಿಗ್ನಲಿಗೆ ಒಂದು ಸಿಗ್ನಲ್ ಬೂಸ್ಟರ್ ಅಂದರೆ ಸಿಗ್ನಲನ್ನು ಹೆಚ್ಚು ಮಾಡುವಂತಹದು ತಯಾರಿಸಿದರೆ ಹೇಗೆ ಎಂದು ಆಲೋಚನೆ ಮಾಡಿದೆ. ಮನೆಯಲ್ಲಿ ಹುಡುಕಿದಾಗ ಹಳೆಯ ಡಬ್ಬ ಒಂದು ದೊರೆಯಿತು. ಅದನ್ನೇ ಕತ್ತರಿಸಿ ಪ್ರತಿಫಲನಾತ್ಮಕ ಸಿಗ್ನಲ್ ಬೂಸ್ಟರ್ ಮಾಡಿದೆ. ವಿವರಗಳು ಮಂದಿನ ಪ್ಯಾರಾಗಳಲ್ಲಿ.

ಸಿಗ್ನಲ್ ಬೂಸ್ಟರ್ ಮಾಡುವ ವಿಧಾನ

ಒಂದು ಹಳೆಯ ಡಬ್ಬ ತೆಗೆದುಕೊಳ್ಳಿ. ಅದು ಸಿಲಿಂಡರಿನಾಕೃತಿಯಲ್ಲಿರಬೇಕು ಹಾಗೂ ಅದು ಲೋಹದಿಂದ ಮಾಡಿರಬೇಕು. ಅಮುಲ್ ಅಥವಾ ಬೋರ್ನ್‌ವಿಟಾ ಡಬ್ಬ ಈ ಕೆಲಸಕ್ಕೆ ಹೇಳಿ ಮಾಡಿಸಿದಂತಿದೆ. ಅದರ ಮುಚ್ಚಳ ನಮ್ಮ ಕೆಲಸಕ್ಕೆ ನಿರುಪಯುಕ್ತ. ಉಳಿದ ಡಬ್ಬವನ್ನು ಉದ್ದಕ್ಕೆ ಕತ್ತರಿಸಿ. ಡಬ್ಬ ಕತ್ತರಿಸಲೆಂದೇ ಮಾರುಕಟ್ಟೆಯಲ್ಲಿ ವಿಶೇಷ ಕತ್ತರಿ ಸಿಗುತ್ತದೆ. ಅದನ್ನು ಬಳಸಿದರೆ ಕೆಲಸ ಸುಗಮ. ಚಿಕ್ಕ ಗರಗಸವನ್ನು ಕೂಡ ಬಳಸಬಹುದು. ಕತ್ತರಿಸಿದ ನಂತರ ನಿಮಗೆ ಅರ್ಧ ಸಿಲಿಂಡರಾಕೃತಿಯ ಡಬ್ಬ ದೊರೆಯುತ್ತದೆ. ಅದರ ತಳವನ್ನೂ ಅರಿಯಾಗಿ ಅರ್ಧಕ್ಕೆ ಕತ್ತರಿಸಬೇಕು. ಈಗ ಅದರ ತಳದ ಮಧ್ಯಭಾಗದಲ್ಲಿ ಸುಮಾರು ಒಂದು ಸೆ.ಮೀ. ಉದ್ದ ಮತ್ತು ಸುಮಾರು ಅರ್ಧ ಸೆ.ಮೀ. ಅಗಲಕ್ಕೆ ಕತ್ತರಿಸಬೇಕು. ಇದು ಮುಂದಕ್ಕೆ ಉಪಯೋಗಕ್ಕೆ ಬರುತ್ತದೆ.

೩ಜಿ ಡಾಟಾಕಾರ್ಡ್ ಜೊತೆ ಯುಎಸ್‌ಬಿ ಕೇಬಲ್ ಒಂದು ದೊರೆಯುತ್ತದೆ. ಅದು ಈಗ ಕೆಲಸಕ್ಕೆ ಬರುತ್ತದೆ. ಅದನ್ನು ಬಳಸಿ ಡಾಟಾಕಾರ್ಡ್ ಅನ್ನು ಗಣಕಕ್ಕೆ ಸಂಪರ್ಕಿಸಿ. ಈಗ ನೀವು ತಯಾರಿಸಿದ ಅರ್ಧಡಬ್ಬವನ್ನು ತಲೆಕೆಳಗಾಗಿ ನೇತು ಹಾಕಬೇಕು. ಅದರ ಮಧ್ಯಭಾಗದಲ್ಲಿ ಮಾಡಿದ ಚಿಕ್ಕ (ಒಂದು ಸೆ.ಮೀ ಉದ್ದ ಅರ್ಧ ಸೆ.ಮೀ. ಅಗಲ) ಸೀಳು ಈಗ ಕೆಲಸಕ್ಕೆ ಬರುತ್ತದೆ. ಡಾಟಾಕಾರ್ಡನ್ನು ಸರಿಯಾಗಿ ಅದರಲ್ಲಿ ಕೂರಿಸಿ. ಈಗ ನಿಮ್ಮ ಸಿಗ್ನಲ್ ಬೂಸ್ಟರ್ ತಯಾರು ಎಂದು ತಿಳಿದುಕೊಳ್ಳಬಹುದು (ಚಿತ್ರಗಳನ್ನು ನೋಡಿ).

ಇದು ನಿಜವಾಗಿಯೂ ಕೆಲಸ ಮಾಡುತ್ತದೆಯೇ ಎಂದು ವೈಜ್ಞಾನಿಕವಾಗಿ ಪರೀಕ್ಷೆ ಮಾಡಬೇಕಲ್ಲ? ಅದಕ್ಕಂದೇ ಹಲವು ತಂತ್ರಾಂಶಗಳೂ ಜಾಲತಾಣಗಳೂ ಲಭ್ಯವಿವೆ. ಅಂತಹ ಒಂದು ಜಾಲತಾಣ www.broadbandspeedchecker.co.uk. ಈ ಜಾಲತಾಣವನ್ನು ಬಳಸಿ ಪರೀಕ್ಷಿಸಿದೆ. ಸಿಗ್ನಲ್ ಬೂಸ್ಟರ್ ಬಳಸದೆ ಮೊದಲ ಪರೀಕ್ಷೆ. ಡೌನ್‌ಲೋಡ್ ವೇಗ ೧.೩ ಎಂಬಿಪಿಎಸ್ ಬಂತು. ಸಿಗ್ನಲ್ ಬೂಸ್ಟರ್ ಬಳಸಿ ಇನ್ನೊಮ್ಮೆ ಪರೀಕ್ಷೆ ಮಾಡಿದೆ.  ಆಗ ವೇಗ ೩.೫ ಎಂಬಿಪಿಎಸ್ ಬಂತು. ಅಂದರೆ  ಸಿಗ್ನಲ್ ಬೂಸ್ಟರ್ ಬಳಸಿದರೆ ಸುಮಾರು ಮೂರು ಪಟ್ಟು ಹೆಚ್ಚು ವೇಗದಲ್ಲಿ ಡೌನ್‌ಲೋಡ್ ಮಾಡಬಹುದು. ಇಲ್ಲಿ ಏನಾಗುತ್ತಿದೆಯಂದರೆ ಅರ್ಧ ಸಿಲಿಂಡರಿನಾಕೃತಿಯ ಲೋಹದ ಡಬ್ಬವು ತನ್ನ ಮೈಮೇಲೆ ಬಿದ್ದ ಕಿರಣಗಳನ್ನು ತನ್ನ ಕೇಂದ್ರ ಭಾಗಕ್ಕೆ ಪ್ರತಿಫಲಿಸಿ ಅಲ್ಲಿ ಕೇಂದ್ರೀಕರಣಗೊಳ್ಳುವಂತೆ ಮಾಡುತ್ತದೆ. ಈ ಎಲ್ಲ ಪರೀಕ್ಷೆಗಳನ್ನು ಡಾಟಾಕಾರ್ಡನ್ನು ಕಿಟಿಕಿಗೆ ನೇತುಹಾಕಿ ಮಾಡಲಾಗಿತ್ತು.

ಡಬ್ಬದಿಂದ ಬಾಣಲೆಗೆ

ಏನಿದು ಡಬ್ಬದಿಂದ ಬಾಣಲೆಗೆ? ಹಳೆಯ ಗಾದೆ ಬೆಂಕಿಯಿಂದ ಬಾಣಲೆಗೆ ಇಲ್ಲೇಕೆ ಬಂತು ಅಂದುಕೊಳ್ಳುತ್ತಿದ್ದೀರಾ? ಆ ಗಾದೆಗೂ ನಾನು ಈಗ ಬರೆಯಹೊರಟಿರುವುದಕ್ಕೂ ಏನೇನೂ ಸಂಬಂಧವಿಲ್ಲ. ಬಾಣಲೆಯ ಆಕಾರ ನೆನಪು ಮಾಡಿಕೊಳ್ಳಿ. ಅದು ಅರ್ಧಗೋಲಾಕಾರ, ಆರ್ಧ ಪ್ಯಾರಾಬೋಲ ಅಥವಾ ಅರ್ಧ ಹೈಪರ್‌ಬೋಲ. ಇವುಗಳೆಲ್ಲದರ ಗುಣ ಬಹುಮಟ್ಟಿಗೆ ಒಂದೆ. ಇವು ತಮ್ಮ ಮೇಲೆ ಬಿದ್ದ ಕಿರಣಗಳನ್ನು ತಮ್ಮ ಕೇಂದ್ರ ಬಿಂದುವಿನಲ್ಲಿ ಕೇಂದ್ರೀಕರಿಸುತ್ತವೆ. ಹಾಗಿದ್ದರೆ ಇದನ್ನು ಅಂತರಜಾಲ ಸಿಗ್ನಲ್ ಕೇಂದ್ರೀಕರಿಸಲೂ ಬಳಸಬಹುದಲ್ಲ ಎಂದು ಚಿಂತಿಸಿದೆ. ನೋಡಿಯೋ ಬಿಡೋಣ ಎಂದುಕೊಂಡು ಒಂದು ಅಲ್ಯೂಮಿನಿಯಂ ಬಾಣಲೆಯ ಮಧ್ಯದಲ್ಲಿ ಬಿಎಸ್‌ಎನ್‌ಎಲ್‌ನವರ ೩ಜಿ ಡಾಟಾಕಾರ್ಡ್ ಇಟ್ಟು ವೇಗದ ಪರೀಕ್ಷೆ ಮಾಡಿದೆ. ಬಾಣಲೆ ಇಲ್ಲದಿದ್ದಾಗ (ಮನೆಯೊಳಗೆ) ೦.೩೭೫ ಎಂಬಿಪಿಎಸ್ ವೇಗ ಬಂತು. ಬಾಣಲೆಯೊಳಗೆ ಇಟ್ಟಾಗ ೦.೭೨೭ ಎಂಬಿಪಿಎಸ್ ವೇಗ ಬಂತು. ಅರ್ಥಾತ್ ಬಾಣಲೆಯೊಳಗೆ ಇಟ್ಟಾಗ ವೇಗ ದುಪ್ಪಟ್ಟು ಆಯಿತು.